ಕರ್ನಾಟಕ

karnataka

ETV Bharat / state

ಬಾವಿಗೆ ಬಿದ್ದ ಒಂದು ವರ್ಷದ ಚಿರತೆ: ಬೋನಿನೊಂದಿಗೆ ಬಾವಿಗೆ ಇಳಿದು ರಕ್ಷಿಸಿದ ಮಹಿಳಾ ಪಶು ವೈದ್ಯೆ

ಬಾವಿಯೊಳಗೆ ಬಿದ್ದಿದ್ದ ಚಿರತೆ ಮರಿಯನ್ನು ರಕ್ಷಿಸಿರುವ ಘಟನೆ ಮಂಗಳೂರಿನ ಹೊರವಲಯದ ಕಟೀಲು ಸಮೀಪದ ನಿಡ್ಡೋಡಿಯಲ್ಲಿ ನಡೆದಿದೆ.

leopard protected by Female Veterinarian
ಬೋನಿನೊಂದಿಗೆ ಬಾವಿಗೆ ಇಳಿದು ರಕ್ಷಿಸಿದ ಮಹಿಳಾ ಪಶು ವೈದ್ಯೆ

By

Published : Feb 13, 2023, 6:34 PM IST

Updated : Feb 14, 2023, 1:44 PM IST

ಬಾವಿಗೆ ಬಿದ್ದ ಚಿರತೆ ಮರಿಯನ್ನು ರಕ್ಷಿಸಿದ ಮಹಿಳಾ ಪಶುವೈದ್ಯೆ

ಮಂಗಳೂರು: ಬಾವಿಗೆ ಬಿದ್ದ ಒಂದು ವರ್ಷದ ಚಿರತೆಯೊಂದನ್ನು ಮಹಿಳಾ ಪಶು ವೈದ್ಯಾಧಿಕಾರಿ ಬೋನಿನಲ್ಲಿ ಬಾವಿಗಿಳಿದು ರಕ್ಷಿಸಿದ ಘಟನೆ ನಡೆದಿದೆ. ಮಂಗಳೂರಿನ ಹೊರವಲಯದ ಕಟೀಲು ಸಮೀಪದ ನಿಡ್ಡೋಡಿಯಲ್ಲಿ ಎರಡು ದಿನಗಳ ಹಿಂದೆ ಸುಮಾರು 1 ವರ್ಷ ಪ್ರಾಯದ ಚಿರತೆ ಬಾವಿಯೊಳಗೆ ಬಿದ್ದಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನು ಬೋನಿನಲ್ಲಿ ಮೇಲೆತ್ತಲು ಪ್ರಯತ್ನಿಸಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ.

ಚಿರತೆಯು ಬಾವಿಯೊಳಗೆ ಒಂದು ಸಣ್ಣ ಗುಹೆ ತರಹದ ಜಾಗದಲ್ಲಿ ಅವಿತು ಕೂರುತ್ತಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಪಶು ವೈದ್ಯರನ್ನು ಕರೆದು ಕಾರ್ಯಾಚರಣೆ ಮೂಲಕ ಚಿರತೆಯನ್ನು ರಕ್ಷಿಸಿದ್ದಾರೆ. ಡಾ ಮೇಘನಾ ಪೆಮ್ಮಯ್ಯ, ಡಾ. ಪ್ರಥ್ವಿ, ಡಾ. ನಫೀಸಾ ಮತ್ತು ಡಾ ಯಶಸ್ವಿ ನಾರಾವಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಡಾ. ಮೇಘನಾ ಅವರು ಅರವಳಿಕೆ ಮದ್ದನ್ನು ಗನ್ ನಲ್ಲಿ ತುಂಬಿಸಿದ್ದರು. ಅರಣ್ಯ ಇಲಾಖೆ ಸಿದ್ಧಪಡಿಸಿದ ಬೋನಿನೊಳಗೆ ಕುಳಿತುಕೊಂಡ ಅವರನ್ನು ಬೋನಿನ ಸಮೇತ ಬಾವಿಯೊಳಗೆ ನಿಧಾನವಾಗಿ ಇಳಿಸಲಾಯಿತು.

ಬೋನಿನೊಂದಿಗೆ ಬಾವಿಗೆ ಇಳಿದು ರಕ್ಷಿಸಿದ ಮಹಿಳಾ ಪಶು ವೈದ್ಯೆ

ಬಾವಿಯೊಳಗೆ ಬೋನಿನೊಂದಿಗೆ ಇಳಿದ ಡಾ ಮೇಘನಾ ಅವರು ಚಿರತೆಗೆ ಅರಿವಳಿಕೆಯನ್ನು ಗನ್ ಮೂಲಕ ಶೂಟ್ ಮಾಡಿ ಅದನ್ನು ಪ್ರಜ್ಞಾ ಹೀನಗೊಳಿಸಿದರು. ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರು ಹಗ್ಗದ ಮೂಲಕ ಬಾವಿಗಿಳಿದು ಚಿರತೆಯನ್ನು ಡಾ ಮೇಘನಾ ಇದ್ದ ಬೋನಿನೊಳಗೆ ಹಾಕಿದ್ದಾರೆ. ಆ ಬಳಿಕ ಬೋನನ್ನು ನಿಧಾನವಾಗಿ ಮೇಲೆತ್ತಲಾಯಿತು. ಮೇಲೆತ್ತಿದ್ದ ಬಳಿಕ ಚಿರತೆಗೆ ಪ್ರಜ್ಞೆ ಬರುವ ಇಂಜೆಕ್ಷನ್ ನೀಡಿ ಪ್ರಜ್ಞೆ ಬರಿಸಲಾಯಿತು. ಅದರ ಆರೋಗ್ಯವನ್ನು ಪರೀಕ್ಷಿಸಿದ ಬಳಿಕ ಅದನ್ನು ಕಾಡಿಗೆ ಬಿಡಲಾಗಿದೆ.

ಈ ಬಗ್ಗೆ ಈಟಿವಿ ಭಾರತ​​ ಜೊತೆಗೆ ಮಾತನಾಡಿದ ಪಶು ವೈದ್ಯ ಡಾ ಯಶಸ್ವಿ ನಾರಾವಿ ಅವರು ಬಾವಿಯೊಳಗೆ ಬೋನಿನೊಂದಿಗೆ ಇಳಿದು ಚಿರತೆಯನ್ನು ರಕ್ಷಿಸುವುದು ಸವಾಲಿನ ಕೆಲಸವಾಗಿತ್ತು. ಬೋನು ಇಳಿಯುವ ಸಂದರ್ಭದಲ್ಲಿ ಲೆಕ್ಕಾಚಾರ ತಪ್ಪಿದರೆ ಚಿರತೆ ದಾಳಿ ಮಾಡುವ ಸಾಧ್ಯತೆ ಇತ್ತು. ಆದರೂ ಓರ್ವ ಮಹಿಳೆಯಾಗಿ ಡಾ ಮೇಘನಾ ಅವರು ಶ್ಲಾಘನೀಯ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ನೀರು ಕುಡಿಯಲು ಬಂದು ಟ್ಯಾಂಕ್‌ಗೆ ಬಿದ್ದ ಜಿಂಕೆ ಮರಿ ರಕ್ಷಣೆ : ಇನ್ನುಕಾಡಿನಿಂದ ನೀರಿಗಾಗಿ ಬಂದ ಜಿಂಕೆ ಮರಿ ಟ್ಯಾಂಕ್​ಗೆ ಬಿದ್ದ ಘಟನೆ ಧಾರವಾಡದ ಸತ್ತೂರಿನ ಶ್ರೇಯಾ ಕಾಲೇಜಿನ ಆವರಣದಲ್ಲಿ ನಡೆದಿದೆ. ಜಿಂಕೆ ಮರಿ ತನ್ನ ದಾಹ ತೀರಿಸಿಕೊಳ್ಳಲು ಬಂದಿತ್ತು. ಈ ವೇಳೆ, ಸ್ಥಳೀಯರು ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ಮುಟ್ಟಿಸಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಉಪವಲಯ ಅರಣ್ಯಾಧಿಕಾರಿ ಯಲ್ಲಾನಾಯಕ ಲಮಾಣಿ, ಪ್ರಾಣಿಪ್ರಿಯ ಸೋಮಶೇಖರ ಚೆನ್ನಶೆಟ್ಟಿ ಹಾಗೂ ವೈದ್ಯ ಸತೀಶ ಇರಕಲ್ ಅವರು ಜಿಂಕೆ ಮರಿಯನ್ನು ರಕ್ಷಣೆ ಮಾಡಿ ಮತ್ತೆ ಅದನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬಂದಿದ್ದಾರೆ. ದಾಹ ತೀರಿಸಿಕೊಳ್ಳಲು ಬಂದಿದ್ದ ಜಿಂಕೆ ಮರಿ ಆಯತಪ್ಪಿ ಟ್ಯಾಂಕ್​​​ಗೆ ಬಿದ್ದಿತ್ತು. ವಿಷಯ ತಿಳಿದ ಮೂವರು ಐದು ವರ್ಷದ ಜಿಂಕೆ ಮರಿಯನ್ನು ರಕ್ಷಿಸಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬಂದಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕಾಡಿನಿಂದ ನಾಡಿಗೆ ಪ್ರಾಣಿಗಳು ಹೆಚ್ಚಾಗಿ ಬರುತ್ತಿವೆ. ಈ ಹಿಂದೆ ಕೂಡ ಕವಿವಿ ಆವರಣದ ಹಿಂಭಾಗದಲ್ಲಿ ಆನೆಗಳು ಹಿಂಡು ಕಂಡು ಬಂದಿತ್ತು. ಅವುಗಳನ್ನು ಸಹ ಅರಣ್ಯ ಇಲಾಖೆ ಅಧಿಕಾರಿಗಳು ಸುರಕ್ಷಿತವಾಗಿ ಕಾಡಿಗೆ ಅಟ್ಟಿದ್ದರು.

ಇದನ್ನೂ ಓದಿ :ಮಂಗಳೂರು ವಿಮಾನ ನಿಲ್ದಾಣದಲ್ಲಿ 2.60 ಕೋಟಿ ರೂ. ಮೌಲ್ಯದ ವಜ್ರ ವಶ

Last Updated : Feb 14, 2023, 1:44 PM IST

ABOUT THE AUTHOR

...view details