ಸುಬ್ರಹ್ಮಣ್ಯ /ದಕ್ಷಿಣ ಕನ್ನಡ: ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕೈಕಂಬ ಎಂಬಲ್ಲಿ ಟಾಯ್ಲೆಟ್ ಒಳಗಡೆ ಬಂಧಿಯಾಗಿದ್ದ ಚಿರತೆ ಸೆರೆ ವೇಳೆ ಚಾಲಾಕಿ ಚಿರತೆ ಪರಾರಿಯಾಗಿದೆ.
ಚಿರತೆ ಎಸ್ಕೇಪ್, ನಾಯಿ ಬಚಾವ್..! ಸುಬ್ರಹ್ಮಣ್ಯ ಸಮೀಪದ ಕೈಕಂಬ ಜಯಲಕ್ಷ್ಮಿ ಎಂಬವರ ಮನೆಯ ನಾಯಿಯನ್ನು ಹಿಡಿಯಲು ಬಂದ ಚಿರತೆ ಹೆದರಿ ಓಡಿದ ನಾಯಿ ಜೊತೆಗೆ ಟಾಯ್ಲೆಟ್ ಒಳಗಡೆ ನುಗ್ಗಿತ್ತು. ಚಿರತೆಯನ್ನು ಗಮನಿಸಿದ ಮನೆಯವರು ಬಾಗಿಲು ಹಾಕಿದ್ದು, ಚಿರತೆ ಮತ್ತು ನಾಯಿ ಟಾಯ್ಲೆಟ್ ಒಳಗಡೆ ಬಂಧಿಯಾಗಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಿನ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಅರಿವಳಿಕೆ ನೀಡಿ ಚಿರತೆಯನ್ನು ಹಿಡಿಯುವ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಚಿರತೆ ಎಸ್ಕೇಪ್ ಆಗಿದೆ.
ಸಾವಿನ ದವಡೆಯಿಂದ ಪಾರಾದ ನಾಯಿ!
ಚಿರತೆ ಜತೆ ಟಾಯ್ಲೆಟ್ನಲ್ಲಿ ಬಂಧಿಯಾಗಿದ್ದ ನಾಯಿಯ ಆಯುಷ್ಯ ಗಟ್ಟಿಯಿತ್ತು. ನಾಯಿ ಒಂದು ಮೂಲೆಯಲ್ಲಿ ಹೆದರಿ ಕುಳಿತಿದ್ದರೆ. ಚಿರತೆ ಟಾಯ್ಲೆಟ್ನ ಇನ್ನೊಂದು ಕಡೆಯಲ್ಲಿ ಚಡಪಡಿಸುತ್ತಿತ್ತು. ಸರಿಯಾದ ತರಬೇತಿ ಇಲ್ಲದೆ ಚಿರತೆ ಹಿಡಿಯಲು ಅರಣ್ಯ ಅಧಿಕಾರಿಗಳು ಹರಸಾಹಸ ಪಟ್ಟರು. ಎಷ್ಟೇ ಕಷ್ಟಪಟ್ಟರೂ ಅರಣ್ಯಾಧಿಕಾರಿಗಳಿಗೆ ಚಿರತೆ ಸೆರೆ ಹಿಡಿಯಲು ಆಗಿಲ್ಲ. ಚಿರತೆ ಟಾಯ್ಲೆಟ್ನಿಂದ ಎಸ್ಕೇಪ್ ಆಯಿತು. ಆದರೆ, ಟಾಯ್ಲೆಟ್ನಲ್ಲಿ ಚಿರತೆ ಜತೆ ಬಂಧಿಯಾಗಿದ್ದ ನಾಯಿ ಬಚಾವಾಯಿತು.
ಗ್ರಾಮಸ್ಥರ ಆಕ್ರೋಶ
ಚಿರತೆಯನ್ನು ಸೆರೆ ಹಿಡಿಯಲು ವಿಫಲವಾಗಿದ್ದಕ್ಕೆ ಗ್ರಾಮಸ್ಥರು ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಏರ್ ಗನ್ ಇದ್ದರೂ ಸರಿಯಾದ ರೀತಿಯಲ್ಲಿ ಆಪರೇಟ್ ಮಾಡಲೂ ಅರಣ್ಯ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಸ್ಮೃತಿ ತಪ್ಪಿಸುವ ಔಷಧ ತುಂಬಿಸುವ ಬಗ್ಗೆ ಸ್ಥಳೀಯ ಪಶುಸಂಗೋಪನಾ ಅಧಿಕಾರಿಗಳಲ್ಲಿ ಸಹ ಗೊಂದಲ ಏರ್ಪಾಡಾಗಿತ್ತು. ಸರಿಯಾದ ವ್ಯವಸ್ಥೆ ಇಲ್ಲದೆಯೇ ಚಿರತೆ ರಕ್ಷಣಾ ಕಾರ್ಯಾಚರಣೆ ಮಾಡಲಾಗಿತ್ತು. ಹೀಗಾಗಿ ಚಿರತೆ ತಪ್ಪಿಸಿಕೊಂಡು ಓಡಿ ಹೋಯಿತು. ಮುಂದಿನ ದಿನಗಳಲ್ಲಾದರೂ ಸರಿಯಾಗಿ ಅರಿವಳಿಕೆ ಔಷಧ ಗನ್ ಅಪರೇಟ್ ಮಾಡುವ ಅಧಿಕಾರಿಗಳನ್ನು ಈ ಪ್ರದೇಶದಲ್ಲಿ ನೇಮಕ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಟಾಯ್ಲೆಟ್ನೊಳಗೆ ಬಂದಿಯಾದ ಚಿರತೆ ಮತ್ತು ನಾಯಿ..!