ಕರ್ನಾಟಕ

karnataka

ETV Bharat / state

ಮಂಗಳೂರಿನ ಕಿನ್ನಿಗೋಳಿಯಲ್ಲಿ ಉರುಳಿಗೆ ಸಿಲುಕಿ ಪ್ರಾಣ ಬಿಟ್ಟ ಚಿರತೆ - ಈಟಿವಿ ಭಾರತ್​ ಕನ್ನಡ ನ್ಯೂಸ್​

ಚಿರತೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸುರತ್ಕಲ್‌ಗೆ ಕಳುಹಿಸಲಾಗಿದೆ.

ಚಿರತೆ ಸಾವು
ಚಿರತೆ ಸಾವು

By

Published : Jun 6, 2023, 6:29 PM IST

ಮಂಗಳೂರು (ದಕ್ಷಿಣ ಕನ್ನಡ) :ಉರುಳಿಗೆ ಸಿಲುಕಿ ಚಿರತೆ ಅಸುನೀಗಿದ ಘಟನೆ ಮಂಗಳೂರು ಹೊರವಲಯದ ಕಿನ್ನಿಗೋಳಿ‌ ಬಳಿಯ ‌ಮಿತ್ತಬೆಟ್ಟು ಎಂಬಲ್ಲಿ ನಡೆದಿದೆ. ಮಿತ್ತಬೆಟ್ಟು ಎಂಬಲ್ಲಿ ಕಾಡು ಪ್ರಾಣಿಗಳ ಹಾವಳಿ ತಡೆಗೆ ಸ್ಥಳೀಯರು ಉರುಳು ಹಾಕಿದ್ದರು. ಕಳೆದ ರಾತ್ರಿ ಚಿರತೆ ಉರುಳಿಗೆ ಸಿಲುಕಿಕೊಂಡಿದೆ. ಇಂದು ಮುಂಜಾನೆ ಚಿರತೆ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.

ಮುಂಜಾನೆಯ ಹೊತ್ತಿಗೆ ಕಾಡಿನ ಕಡೆಯಿಂದ ನಾಯಿ ಬೊಗಳುವ ಶಬ್ದ ಕೇಳಿದ ಸ್ಥಳೀಯ ಮನೆಯವರು ಭಯಭೀತರಾಗಿ ಸ್ಥಳಕ್ಕೆ ಧಾವಿಸಿದಾಗ ಉರುಳಿಗೆ ಚಿರತೆ ಬಿದ್ದು ಒದ್ದಾಡುತ್ತಿರುವುದು ಕಂಡು ಬಂದಿದೆ. ಕೂಡಲೇ ಸ್ಥಳೀಯ ಐಕಳ ಗ್ರಾಮ ಪಂಚಾಯತ್ ಸದಸ್ಯ ರಾಜೇಶ್ ಶೆಟ್ಟಿ ಮತ್ತು ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಬರುವ ಮೊದಲೇ ಚಿರತೆ ಉರುಳಿಗೆ ಸಿಲುಕಿ ಒದ್ದಾಡಿ ಪ್ರಾಣ ಬಿಟ್ಟಿದೆ. ಇನ್ನು ಮಾಹಿತಿ ತಿಳಿದು ಸ್ಥಳಕ್ಕೆ ಅರಣ್ಯಾಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಭಾಗದಲ್ಲಿ ಕಳೆದ ಕೆಲವು ತಿಂಗಳಿನಿಂದ ಚಿರತೆ ಹಾಗೂ ಇತರ ಕಾಡು ಪ್ರಾಣಿಗಳ ಕಾಟ ವಿಪರೀತವಾಗಿದೆ. ಇದರಿಂದ ಸ್ಥಳೀಯರು ಭಯಭೀತರಾಗಿದ್ದರು. ಕಳೆದ ಕೆಲವು ತಿಂಗಳಿನಿಂದ ಸ್ಥಳೀಯರ ಅನೇಕ ಸಾಕು ನಾಯಿಗಳು ಚಿರತೆಗೆ ಆಹಾರವಾಗಿತ್ತು. ಈ ಹಿನ್ನೆಲೆಯಲ್ಲಿ ಕಾಡಿನಲ್ಲಿ ಸ್ಥಳೀಯರು ಉರುಳು ಹಾಕಿದ್ದರು.

ಈ ಸಂದರ್ಭದಲ್ಲಿ ಸ್ಥಳಕ್ಕೆ ಐಕಳ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದಿವಾಕರ ಚೌಟ, ಮೂಡಬಿದ್ರೆ ವಲಯ ಅರಣ್ಯಾಧಿಕಾರಿ ಹೇಮಗಿರಿ ಅಂಗಡಿ, ಎಸಿಎಫ್ ಸತೀಶ್, ಕಿನ್ನಿಗೋಳಿ ಬೀಟ್ ಫಾರೆಸ್ಟರ್ ರಾಜು ಎಲ್.ಜೆ, ಡಿಆ‌ಎಫ್ ನಾಗೇಶ್ ಬಿಲ್ಲವ, ಬೀಟ್ ಫಾರೆಸ್ಟರ್ ಸಂತೋಷ್ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆ ಬಳಿಕ ಚಿರತೆಯ ಮೃತದೇಹವನ್ನು ಮಹಜರು ನಡೆಸಿ ಮರಣೋತ್ತರ ಪರೀಕ್ಷೆಗೆ ಸುರತ್ಕಲ್ ಗೆ ಕಳುಹಿಸಲಾಗಿದೆ.

ಗಾಯಗೊಂಡ ಚಿರತೆಯಿಂದ ಮಹಿಳೆ ಮೇಲೆ ದಾಳಿ :ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ತುಮ್ಮಿನಕಟ್ಟಿ ಗ್ರಾಮದಲ್ಲಿ ಮಹಿಳೆ ಮೇಲೆ ಗಾಯಗೊಂಡಿರುವ ಚಿರತೆಯೊಂದು ದಾಳಿ ನಡೆಸಿರುವ ಘಟನೆ ನಡೆದಿತ್ತು. ಸಿದ್ದಮ್ಮ (55) ಎಂಬವರ ಮೇಲೆ ಚಿರತೆ ದಾಳಿ ನಡೆಸಿದ್ದು ಮುಖ, ಕೈ ಮೇಲೆ ತೀವ್ರ ಗಾಯಗಳಾಗಿದ್ದವು. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕ ಆಗಮಿಸಿದ ಗ್ರಾಮಸ್ಥರು ಚಿರತೆ ಮೇಲೆ ದಾಳಿ ನಡೆಸಿದ್ದರು. ಮೊದಲೇ ತೀವ್ರ ನಿತ್ರಾಣದಲ್ಲಿದ್ದ ಚಿರತೆ ಕೂಡ ಸಾವನ್ನಪ್ಪಿದೆ.

ಘಟನೆ ನಡೆದ ಬಳಿಕ ಈ ಕುರಿತು ಅರಣ್ಯ ಅಧಿಕಾರಿಗಳಿಗೆ ಗ್ರಾಮಸ್ಥರು ಮಾಹಿತಿ ನೀಡಿದ್ದು, ಚಿರತೆಯ ಬಾಯಲ್ಲಿ ಹುಣ್ಣಾಗಿತ್ತು. ಹುಣ್ಣಿನಿಂದ ಚಿರತೆ ನಿತ್ರಾಣಗೊಂಡು ಸಾವನ್ನಪ್ಪಿದೆ ಎಂದು ತಿಳಿಸಿದ್ದರು. ಇನ್ನು ಮಾಹಿತಿ ಪಡೆದು ತಕ್ಷಣ ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಮರಣೋತ್ತರ ಪರೀಕ್ಷೆಗೆ ಚಿರತೆ ಮೃತದೇಹವನ್ನು ಕಳುಹಿಸಿದ್ದರು. ರಾಜ್ಯದ ಹಲವೆಡೆ ಕಾಡು ಪ್ರಾಣಿಗಳು ಮತ್ತು ಮನುಷ್ಯನ ನಡುವೆ ಸಂಘರ್ಷ ನಡೆಯುತ್ತಿದೆ.

ಇದನ್ನೂ ಓದಿ :ಮನೆಯಂಗಳದಲ್ಲಿ ಚಿರತೆ; ಸಿದ್ಧಾಪುರದಲ್ಲಿ ಜನರ ಆತಂಕ- ಸಿಸಿಟಿವಿ ವಿಡಿಯೋ

ABOUT THE AUTHOR

...view details