ಸುಳ್ಯ(ದಕ್ಷಿಣ ಕನ್ನಡ): ತಾಲೂಕಿನಲ್ಲಿ ಇಂದಿನಿಂದ ಮೂರು ವಾರಗಳ ಕಾಲ ನಡೆಯಲಿರುವ ಲಸಿಕಾ ಅಭಿಯಾನಕ್ಕೆ ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಸುಳ್ಯದ ಗಾಂಧಿನಗರ ಪಬ್ಲಿಕ್ ಸ್ಕೂಲ್‌ನಲ್ಲಿ ಚಾಲನೆ ಕೊಟ್ಟರು. ರಾಜ್ಯದಲ್ಲಿ ಈ ಅಭಿಯಾನದಡಿ 9 ತಿಂಗಳಿಂದ 15 ವರ್ಷದೊಳಗಿನ ಸುಮಾರು 48 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿ ಇದೆ. ಸುಳ್ಯ ತಾಲೂಕಿನಲ್ಲಿ ಸುಮಾರು 26,000 ಮಕ್ಕಳಿಗೆ ಲಸಿಕೆ ನೀಡಲಾಗುವುದು ಎಂದು ತಾಲೂಕು ವೈದ್ಯಾಧಿಕಾರಿ ಡಾ.ನಂದಕುಮಾರ್ ಈಟಿವಿ ಭಾರತಕ್ಕೆ ತಿಳಿಸಿದರು.
ಏನಿದು ಜೆವಿ ಮೆದುಳುಜ್ವರ?:ಜೆಇ ಮೆದುಳು ಜ್ವರ ಪ್ಲೇವಿವೈರಸ್ ಎಂಬ ವೈರಾಣುವಿನಿಂದ ಬರುತ್ತದೆ. ಇದು ಕ್ಯುಲೆಕ್ಸ್ ಸೊಳ್ಳೆಗಳ ಮೂಲಕ ಹರಡುತ್ತದೆ. ಹಂದಿಗಳು ಮತ್ತು ಕೆಲವು ಪಕ್ಷಿಗಳಲ್ಲಿರುವ ಈ ವೈರಾಣುಗಳು ಮನುಷ್ಯರಿಗೂ ಸೊಳ್ಳೆಗಳ ಮೂಲಕ ಹರಡುತ್ತವೆ. ಈ ಸೋಂಕಿಗೆ ತುತ್ತಾದ ರೋಗಿಗಳಿಗೆ ಯಾವುದೇ ವಿಶೇಷವಾದ ಲಕ್ಷಣಗಳಿರುವುದಿಲ್ಲ. ಸೋಂಕು ತಗುಲಿದ ಕೆಲವೇ ವ್ಯಕ್ತಿಗಳಿಗೆ ತೀವ್ರತರ ರೋಗಲಕ್ಷಣಗಳು ಬಾಧಿಸಬಹುದು.
ಸೋಂಕು ತಗುಲಿದ 5 ರಿಂದ 15 ದಿನಗಳೊಳಗೆ ಸೋಂಕು ಉಲ್ಬಣಗೊಳ್ಳುತ್ತದೆ. ತೀವ್ರ ತಲೆನೋವು, ವಾಂತಿ, ಚಳಿಯೊಂದಿಗೆ ವಿಪರೀತ ಜ್ವರ, ಮೆದುಳಿನ ಉರಿಯೂತ, ಅಪಸ್ಮಾರ, ನರಮಂಡಲದ ಇತರ ದೋಷಗಳು ಕಾಣಿಸಿಕೊಳ್ಳಬಹುದು. ಪ್ರಜ್ಞಾಹೀನತೆ, ಲಕ್ವಾ ಹೊಡೆಯುವುದು ಇವು ಅಂತಿಮ ಹಂತದಲ್ಲಿ ಕಂಡುಬರುವ ಲಕ್ಷಣಗಳಾಗಿವೆ. ಸೂಕ್ತ ಚಿಕಿತ್ಸೆ ದೊರೆಯದಿದ್ದರೆ ಸಾಧಾರಣವಾಗಿ 9 ರಿಂದ 10 ದಿನಗಳಲ್ಲಿ ಮರಣವೂ ಸಂಭವಿಸಬಹುದು.
ಲಸಿಕೆ ಸೌಲಭ್ಯ ಹೇಗೆ?: ಸುಳ್ಯ ತಾಲೂಕಿನ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಲಸಿಕೆ ಹಾಕಿಸಲು ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರವು ಉಚಿತವಾಗಿ ಜೆನವ್ಯಾಕ್ ಜೆಇ ಲಸಿಕೆಗಳನ್ನು ಸರಬರಾಜು ಮಾಡಿದೆ.