ಬೆಳ್ತಂಗಡಿ: ನಾಡಿನ ಪವಿತ್ರಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಶ್ರೀ ಮಂಜುನಾಥ ಸ್ವಾಮಿಯ ಲಕ್ಷ ದೀಪೋತ್ಸವ ಇಂದಿನಿಂದ ಆರಂಭಗೊಳ್ಳಲಿದೆ. ಡಿ. 13 ಮತ್ತು 14 ರಂದು 88ನೇ ವರ್ಷದ ಸರ್ವಧರ್ಮ ಸಮ್ಮೇಳನ ಹಾಗೂ ಸಾಹಿತ್ಯ ಸಮ್ಮೇಳನ ನಡೆಯಲಿದೆ.
ಡಿ.10 ರಿಂದ ಡಿ. 14 ರವರೆಗೆ ಹಲವು ಉತ್ಸವಗಳು ಜರುಗಲಿವೆ. ಹೊಸಕಟ್ಟೆ ಉತ್ಸವ, ಕೆರೆಕಟ್ಟೆ ಉತ್ಸವ, ಲಲಿತೋದ್ಯಾನ ಉತ್ಸವ, ಕಂಚಿಮಾರುಕಟ್ಟೆ ಉತ್ಸವ ಹಾಗೂ ಗೌರಿಮಾರುಕಟ್ಟೆ ಉತ್ಸವ ನೆರವೇರಲಿದೆ. ಡಿ. 15 ರಂದು ಶ್ರೀ ಚಂದ್ರನಾಥಸ್ವಾಮಿಯ ಸಮವಸರಣ ಪೂಜೆ ನಡೆಯಲಿದೆ. ಯಶಸ್ವಿ ಕಾರ್ಯಕ್ರಮಕ್ಕೆ ಕ್ಷೇತ್ರದಿಂದ ಸಮಿತಿಗಳನ್ನು ರಚಿಸಲಾಗಿದ್ದು, ಸಕಲ ಸಿದ್ಧತೆಗಳನ್ನು ನಡೆಸಲಾಗಿದೆ. ದೇವರು ಸವಾರಿ ಮಾಡುವ ರಥ ಬೀದಿ, ರಾಜ ಬೀದಿಗಳನ್ನು, ದೇವಸ್ಥಾನ, ಬೀಡು, ಅನ್ನಪೂರ್ಣ ಸೇರಿದಂತೆ ಕ್ಷೇತ್ರದಲ್ಲಿ ವಿದ್ಯುದ್ದೀಪಗಳಿಂದ ಅಲಂಕೃತಗೊಳಿಸಲಾಗಿದೆ.
ಕ್ಷೇತ್ರದಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಭಕ್ತರ ಸುರಕ್ಷತೆಗೆ ಆದ್ಯತೆ ನೀಡಲಾಗಿದ್ದು, ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗುತ್ತಿದೆ. ಕ್ಷೇತ್ರಕ್ಕೆ ಬರುವ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧಾರಣೆ ಮಾಡಬೇಕು ಎಂದು ಕ್ಷೇತ್ರದಿಂದ ವಿನಂತಿಸಲಾಗಿದೆ. ವಸ್ತು ಪ್ರದರ್ಶನ ಹಾಗೂ ಬೀದಿ ಬದಿಯ ಅಂಗಡಿಗಳು ಇರುವುದಿಲ್ಲ.