ಸುಬ್ರಹ್ಮಣ್ಯ(ದಕ್ಷಿಣ ಕನ್ನಡ):ನವೆಂಬರ್ 21ರಿಂದ ನಡೆಯಲಿರುವ ಚಂಪಾ ಷಷ್ಠಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಭಾಂಗಣದಲ್ಲಿ ಸಚಿವ ಎಸ್.ಅಂಗಾರ ಅಧ್ಯಕ್ಷತೆಯಲ್ಲಿ ನಡೆದಿದೆ.
ಎಡೆ ಸ್ನಾನಕ್ಕೆ ಅವಕಾಶ:ಸಭೆಯಲ್ಲಿ ಕಳೆದ ಎರಡು ವರ್ಷಗಳಿಂದ ಕೊರೊನಾ ಹಿನ್ನೆಲೆಯಲ್ಲಿ ನಿರ್ಬಂಧಿಸಲಾಗಿದ್ದ ಎಡೆಸ್ನಾನ ಸೇವೆಗೆ ಈ ಸಲ ಅವಕಾಶ ನೀಡಲಾಗಿದೆ. ಚೌತಿ, ಪಂಚಮಿ, ಷಷ್ಠಿ ದಿನದಂದು ಮಧ್ಯಾಹ್ನ ಮಹಾಪೂಜೆಯ ಬಳಿಕ ಭಕ್ತಾಧಿಗಳು ಸ್ವ-ಇಚ್ಛೆಯಿಂದ ಜಿಲ್ಲಾಧಿಕಾರಿಗಳ ನಿರ್ದೇಶನ ಪಾಲಿಸಿಕೊಂಡು ಸೇವೆಗೆ ಅವಕಾಶ ನೀಡಲು ತೀರ್ಮಾನಿಸಲಾಯಿತು. ಬೀದಿ ಉರುಳು ಸೇವೆ ಮಾಡುವವರಿಗೆ ಲಕ್ಷ ದಿಪೋತ್ಸವ ದಿನದಂದು ರಾತ್ರಿ ರಥೋತ್ಸವದ ಬಳಿಕ ಸಂಜೆ 5 ಗಂಟೆಯಿಂದ ಬೆಳಗ್ಗೆ 8 ಗಂಟೆಯವರೆಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ.
ಬ್ರಹ್ಮರಥೋತ್ಸವಕ್ಕೆ 100 ಸೇವಾ ರಶೀದಿ:ಈ ವರ್ಷ ಬ್ರಹ್ಮರಥೋತ್ಸವ ಸೇವೆಯಲ್ಲಿ ಭಕ್ತರಿಗೆ ಗರಿಷ್ಠ 100 ಸೇವಾ ರಶೀದಿಗಳನ್ನು ನೀಡಲು ಮತ್ತು ಸೇವಾರ್ಥಿಗಳಿಗೆ ವಸತಿ, ಊಟೋಪಚಾರ ವ್ಯವಸ್ಥೆ ಕಲ್ಪಿಸುವ ಬಗ್ಗೆ ಕ್ರಮ ಕೈಗೊಳ್ಳಲಾಯಿತು. ಉಳಿದಂತೆ, ವಿವಿಐಪಿಗಳಿಗೆ ನೀಡುವ ಗುರುತಿನ ಚೀಟಿಯಲ್ಲಿ ಮೊದಲೇ ಅಂದಾಜು ಲೆಕ್ಕ ಪಡೆದು ವಿಭಾಗಿಸಿ ಅವಕಾಶ ನೀಡಲು ಸಲಹೆ ವ್ಯಕ್ತವಾಯಿತು. ಬ್ರಹ್ಮರಥ ಎಳೆಯುವಾಗ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸುವ ಹಾಗೂ ಸೂಕ್ತ ಮುಂಜಾಗ್ರತಾ ವ್ಯವಸ್ಥೆ ಕಲ್ಪಿಸುವ ಬಗ್ಗೆ ಸೂಚಿಸಲಾಯಿತು.
ಜಾನುವಾರು, ಬೀದಿ ನಾಯಿಗಳ ನಿಯಂತ್ರಣ:ದೇಗುಲದಲ್ಲಿ ಅಲೆಮಾರಿ ಜಾನುವಾರು ಹಾಗೂ ಬೀದಿ ನಾಯಿಗಳ ಹಾವಳಿ ವ್ಯಾಪಕವಾಗಿರುವ ಬಗ್ಗೆ ದೂರು ವ್ಯಕ್ತವಾಯಿತು. ಜಾತ್ರಾ ಸಮಯದಲ್ಲಿ ಅನಾಹುತ ಸಂಭವಿಸುವ ಬಗ್ಗೆ ಮುನ್ನಚ್ಚರಿಕೆಯಾಗಿ ಪೂರಕ ಕ್ರಮಕ್ಕೆ ಆಗ್ರಹ ಕೇಳಿ ಬಂತು. ಅಲೆಮಾರಿ ಜಾನುವಾರುಗಳ ಸಂಖ್ಯೆಗಳ ಬಗ್ಗೆ ಪಟ್ಟಿ ಮಾಡಿ ಕೂಡಲೇ ಅವುಗಳನ್ನು ಗೋ ಶಾಲೆಗೆ ಸಾಗಿಸಲು ಸಚಿವರು ಹೇಳಿದರು.
ಪೊಲೀಸ್ ಇಲಾಖೆ, ಪಶುಸಂಗೋಪನಾ ಇಲಾಖೆ, ಸ್ಥಳೀಯಾಡಳಿತ ಒಟ್ಟಾಗಿ ಸಭೆ ನಡೆಸಿ, ಬೀದಿನಾಯಿಗಳನ್ನು ಇಲ್ಲಿಂದ ಹಿಡಿದು ಬೇರೆಡೆಗೆ ಸ್ಥಳಾಂತರಿಸಲು ಸೂಚಿಸಿದ ಡಿಸಿ ರವಿಕುಮಾರ್ ಅವರು ಜಿಲ್ಲಾಡಳಿತದಿಂದ ವಾಹನ ಕಲ್ಪಿಸುವ ಬಗ್ಗೆ ತಿಳಿಸಿದರು.