ಸುಬ್ರಹ್ಮಣ್ಯ: ಕೊರೊನಾ ನಿಯಂತ್ರಣ ಹಿನ್ನೆಲೆ ದೇವಸ್ಥಾನಗಳಿಗೆ ಭಕ್ತರ ಪ್ರವೇಶ ನಿರ್ಬಂಧಿಸಿ ಸರ್ಕಾರದ ಆದೇಶ ನೀಡಿದ ಬೆನ್ನಲ್ಲೇ ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಸ್ವಲ್ಪ ಸಮಯದ ಮಟ್ಟಿಗೆ ಗೊಂದಲದ ವಾತಾವರಣ ನಿರ್ಮಾಣವಾಗಿ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಸರ್ಪ ಸಂಸ್ಕಾರ ಸೇವೆ ಸೇರಿದಂತೆ ಇತರ ಪೂಜಾ ವಿಧಿಗಳಿಗಾಗಿ ನೂರಾರು ಭಕ್ತರು ಒಂದು ದಿನದ ಮುನ್ನವೇ ಕುಕ್ಕೆಗೆ ಆಗಮಿಸಿದ್ದರು. ಸರ್ಪ ಸಂಸ್ಕಾರ ಸೇವೆ ನೆರವೇರಿಸುವ ಮಂದಿ ಎರಡು ದಿನದ ಮೊದಲೇ ಬಂದು ವಾಸ್ತವ್ಯ ಇರಬೇಕಾಗುವುದರಿಂದ ಭಕ್ತರು ಸೇವೆಯನ್ನು ತಿಂಗಳ ಮೊದಲೇ ಬುಕ್ ಮಾಡಿಕೊಂಡು ಬಂದಿದ್ದರು.
ಆದರೆ, ದಿಢೀರ್ ಆಗಿ ದೇಗುಲದಲ್ಲಿ ಸೇವೆ ಬಂದ್ ಮಾಡಿರುವುದಕ್ಕೆ ದೇವಸ್ಥಾನದ ಆಡಳಿತ ಸಮಿತಿಯನ್ನು ಭಕ್ತರು ತರಾಟೆಗೆ ತೆಗೆದುಕೊಂಡರು. ಸರ್ಪ ಸಂಸ್ಕಾರ ಸೇವೆಯನ್ನು ನಡೆಸಲು ಕುಕ್ಕೆಗೆ ಬಂದಿದ್ದೆವು. ಎರಡು-ಮೂರು ತಿಂಗಳ ಮೊದಲೇ ಬುಕ್ ಮಾಡಿದ್ದೆವು. ಆದರೆ ಈಗ ಕೊರೊನಾ ಅಂತ ಹೇಳಿ ದಿಢೀರ್ ಆಗಿ ಪೂಜೆ ರದ್ದುಪಡಿಸಿದ್ದಾರೆ. ದೂರದ ಊರುಗಳಿಂದ ಎರಡು ದಿನ ಮೊದಲೇ ರೂಮ್ ಬುಕ್ ಮಾಡಿಕೊಂಡು ಉಳಿದುಕೊಂಡವರಿಗೆ ಸಮಸ್ಯೆ ಆಗಿದೆ. ಸೇವೆ ಇರುವುದನ್ನು ಖಚಿತಪಡಿಸಿಕೊಂಡೇ ಬಂದಿದ್ದೆವು. ಈಗ ಇಲ್ಲ ಎಂದರೆ ನಾವು ಏನು ಮಾಡಬೇಕು ಎಂದು ಭಕ್ತರು ಪ್ರಶ್ನೆ ಮಾಡುತ್ತಿದ್ದರು.