ಮಂಗಳೂರು :ಮೇಕೆದಾಟು ವಿಚಾರದಲ್ಲಿ ತಮಿಳುನಾಡು ಸರಕಾರದೊಂದಿಗೆ ಭಿಕ್ಷೆ ಬೇಡಬೇಡಿ, ಡಬಲ್ ಇಂಜಿನ್ ಸರಕಾರದ ಪವರನ್ನು ತೋರಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಬೆಂಗಳೂರಿಗೆ ನೀರು ಕೊಡುವ ಪ್ರಮುಖ ಯೋಜನೆಯಾಗಿರುವ ಮೇಕೆದಾಟು ವಿಚಾರದಲ್ಲಿ ಹಿಂದಿನ ನಮ್ಮ ಸರ್ಕಾರ ಸಾಕಷ್ಟು ಪರಿಶ್ರಮ ಪಟ್ಟಿತ್ತು. ಈ ಯೋಜನೆಯಿಂದ ಮುಳುಗಡೆಯಾಗುವ ಶೇ.90ರಷ್ಟು ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಇದೆ.
ಇದರಿಂದ ತಮಿಳುನಾಡಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ತಮಿಳುನಾಡಿನಲ್ಲಿ ಯಾವುದೇ ಪಕ್ಷದ ಸರಕಾರ ಬಂದರೂ ಅವರುಗಳು ನಮ್ಮ ಯೋಜನೆಗೆ ತಕರಾರು ಮಾಡುತ್ತಲೇ ಇರುತ್ತಾರೆ. ಇದು ನಮ್ಮ ಆಂತರಿಕ ವಿಚಾರವಾಗಿದ್ದು, ಮೂರು ವರ್ಷದಲ್ಲಿ ಡ್ಯಾಮ್ ತಯಾರಿಯಾಗಿ ಯೋಜನೆ ಪೂರ್ಣಗೊಳ್ಳಬೇಕು ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿಕೆ ಮುಖ್ಯಮಂತ್ರಿ ಯಡಿಯೂರಪ್ಪನವರು ತಮಿಳುನಾಡು ಮುಖ್ಯಮಂತ್ರಿಗಳ ಜೊತೆ ವಿನಂತಿ ಮಾಡಿದ್ದಾರೆ. ತಮ್ಮದು ಡಬಲ್ ಇಂಜಿನ್ ಸರಕಾರ ಎಂದು ಹೇಳುತ್ತಾ ಬಂದಿದ್ದ ಮುಖ್ಯಮಂತ್ರಿ ಯಡಿಯೂರಪ್ಪನವರು, ತಮಿಳುನಾಡು ಜೊತೆ ಭಿಕ್ಷೆ ಬೇಡಲು ಹೋಗಿದ್ದಾರೆ. ಇದು ರಾಜ್ಯಕ್ಕೆ ಗೌರವ ತರುವ ವಿಚಾರವಲ್ಲ ಎಂದು ಹೇಳಿದರು.
ತಮಿಳುನಾಡು ಜೊತೆ ಚರ್ಚಿಸಿದರೆ ಅವರು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಯಡಿಯೂರಪ್ಪನವರಿಗೆ ರಾಜಕೀಯ ಬದ್ಧತೆ ಇಲ್ಲ. ಯಡಿಯೂರಪ್ಪನವರು ರಾಜ್ಯದ ಜನತೆಯ ಹಿತ ಕಾಪಾಡಬೇಕು. ಪಕ್ಷಾತೀತವಾಗಿ ನಿಮ್ಮ ಜೊತೆ ಇರುತ್ತೇವೆ. ಕೂಡಲೇ ಟೆಂಡರ್ ಕರೆದು ಕೆಲಸ ಆರಂಭಿಸಬೇಕು ಎಂದು ಅವರು ಒತ್ತಾಯಿಸಿದರು.
ಇದನ್ನೂ ಓದಿ : 'ಆ ಹೆಣ್ಣುಮಗಳ ವರ್ತನೆ ನೋಡಿದ್ರೆ ಇಚ್ಛೆಪಟ್ಟು ಹೋಗಿದ್ದಾಳೆ ಎಂಬ ಭಾವನೆ ಬರುತ್ತೆ'
ಸಂಸದೆ ಸುಮಲತಾ ವಿಚಾರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆಯ ವಿಚಾರದಲ್ಲಿ, ಸಚಿವ ಯೋಗೇಶ್ವರ್ ಅವರು ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಯ ಮೀಸಲಾತಿ ವಿಚಾರದಲ್ಲಿ ನೀಡಿರುವ ಹೇಳಿಕೆಯ ವಿಚಾರದಲ್ಲಿ ಅವರು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಪಕ್ಷದಿಂದ ಬಿಟ್ಟುಹೋಗಿರುವ 14 ಶಾಸಕರನ್ನು ಮತ್ತೆ ಕಾಂಗ್ರೆಸ್ಸಿಗೆ ತರುವ ವಿಚಾರದಲ್ಲಿ ಹೆಚ್ಚೇನು ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಅವರು ಅರ್ಜಿ ಸಲ್ಲಿಸಿದ ಬಳಿಕ ಮುಂದೆ ನಿರ್ಧರಿಸುವ ಎಂದು ಹೇಳಿದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹೊಸ ಮುಖಗಳಿಗೆ ಆದ್ಯತೆ :ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಹೊಸ ಮುಖಗಳು ಯುವಕರಿಗೆ ಆದ್ಯತೆ ನೀಡಲಾಗುವುದು. ಇಡೀ ರಾಜ್ಯದಲ್ಲಿ ಯುವ ಮುಖಗಳಿಗೆ ಆದ್ಯತೆ ನೀಡಲು ನಿರ್ಧರಿಸಲಾಗಿದೆ ಎಂದರು.
ಕೇರಳ ಗೋವಾದಂತೆ ಕರ್ನಾಟಕದಲ್ಲೂ ಸಿಆರ್ ಝಡ್ ವಿನಾಯಿತಿ ಇರಲಿ :ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಮೀನುಗಾರರ ಸಮಸ್ಯೆಯನ್ನು ಆಲಿಸಲು ಬಂದಿದ್ದೇನೆ. ಮೀನುಗಾರರಿಗೆ ಸಬ್ಸಿಡಿ ವಿಚಾರದಲ್ಲಿರುವ ಸಮಸ್ಯೆಯ ಜೊತೆಗೆ ಸಾಕಷ್ಟು ಸಮಸ್ಯೆಗಳು ಇರುವುದು ಕಂಡುಕೊಂಡಿದ್ದೇನೆ. ಅದರಲ್ಲಿ ಸಿಆರ್‌ಝೆಡ್ ಸಮಸ್ಯೆಯು ಕೂಡ ಒಂದು.
ನಮ್ಮ ರಾಜ್ಯದ 300 ಕಿಲೋಮೀಟರ್ ವ್ಯಾಪ್ತಿಯ ಸಮುದ್ರತೀರದಲ್ಲಿ 150 ಮೀಟರ್ ಸಿಆರ್‌ಝಡ್ ವ್ಯಾಪ್ತಿಗೆ ಬರುತ್ತದೆ. ಅದೇ ಕೇರಳ ಮತ್ತು ಗೋವಾ ರಾಜ್ಯಗಳಲ್ಲಿ ಸಿಆರ್‌ಝೆಡ್ ವ್ಯಾಪ್ತಿ ಸಮುದ್ರ ತೀರದಿಂದ 50 ಮೀಟರ್ ಇದೆ. ಮೀನುಗಾರರ ಅನುಕೂಲಕ್ಕಾಗಿ ಕೇರಳ ಮತ್ತು ಗೋವಾ ರಾಜ್ಯದಲ್ಲಿರುವಂತೆ ಸಿಆರ್‌ಝೆಡ್ ವ್ಯಾಪ್ತಿಯನ್ನು 50 ಮೀಟರ್‌ಗೆ ಇಳಿಸಿ ಎಂದು ಒತ್ತಾಯಿಸಿದರು.