ಪುತ್ತೂರು :ತುಳುನಾಡಿನ ಅವಳಿ ಕಾರಣಿಕ ಪುರುಷರೆಂಬ ಐತಿಹಾಸಿಕ ಹಿನ್ನೆಲೆಯಿರುವ ಕೋಟಿ-ಚೆನ್ನಯರು ಜನಿಸಿದ ನೈಜ ಜನ್ಮಸ್ಥಳ ಚರಿತ್ರೆಯ ಹಾಗೂ ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಪಡುಮಲೆಯೇ ಆಗಿದೆ.
ಪಡುಮಲೆಯೇ ಕೋಟಿ-ಚೆನ್ನಯರ ನೈಜ ಜನ್ಮಸ್ಥಳ.. ಹರಿಕೃಷ್ಣ ಬಂಟ್ವಾಳ ಆದರೆ, ಅನೇಕ ಮಂದಿಗೆ ಕೋಟಿ-ಚೆನ್ನಯರ ನೈಜ ಜನ್ಮಸ್ಥಳದ ಬಗ್ಗೆ ಗೊಂದಲವಿದೆ. ಹಾಗಾಗಿ ಕೋಟಿ-ಚೆನ್ನಯರ ಜನ್ಮಸ್ಥಳವಾದ ಈ ಪಡುಮಲೆಯ ಪುಣ್ಯಭೂಮಿಗೆ ಎಲ್ಲರೂ ಬಂದು ಕಣ್ಣು ಬಿಟ್ಟು, ಕಿವಿ ತೆರೆದು, ಹೃದಯ ಬಿಚ್ಚಿ ನೋಡಬೇಕು ಎಂದು ಕೋಟಿ-ಚೆನ್ನಯ ಜನ್ಮಸ್ಥಳ ಸಂಚಲನಾ ಸಮಿತಿಯ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಹೇಳಿದರು.
ಕೋಟಿ-ಚೆನ್ನಯರ ಜನ್ಮಸ್ಥಳ ಪಡುಮಲೆಗೆ ಶುಕ್ರವಾರ ಸಂಜೆ ಭೇಟಿ ನೀಡಿ ಮಾತನಾಡಿದ ಅವರು, ಕೋಟಿ-ಚೆನ್ನಯರು ಹುಟ್ಟಿದ್ದು ಇಲ್ಲೇ., ದೇಯಿ ಬೈದ್ಯತಿಯ ಸಮಾಧಿಯೂ ಇಲ್ಲೇ ಇರುವುದು. ಕೋಟಿ-ಚೆನ್ನಯರ ತಂದೆ ಕಾಂತನ ಬೈದ್ಯರ ಮನೆ 100 ಮೀಟರ್ ಅಂತರದಲ್ಲಿದೆ. ಮನುಷ್ಯ ಒಂದು ಕಡೆ ಹುಟ್ಟುವುದು ಹಾಗೂ ಒಂದು ಕಡೆಯ ಸಾಯುವುದು. ಎಲ್ಲಾ ಕಡೆಗಳಲ್ಲಿ ಕುರುಹುಗಳು ಇರಲು ಸಾಧ್ಯವಿಲ್ಲ ಎಂದು ರಾಜ್ಯ ಕಿಯೋನಿಕ್ಸ್ ನಿಗಮದ ಅಧ್ಯಕ್ಷರೂ ಆದ ಹರಿಕೃಷ್ಣ ಬಂಟ್ವಾಳ ಹೇಳಿದರು.
ಎ ಸಿ ಬನರ್ಲ್, ಇಂಗ್ಲಿಷ್ ವಿದ್ವಾಂಸ ಅಗೆಸ್ಟ್ಮೆನಾರ್, ಪಂಜೆ ಮಂಗೇಶರಾಯರು ಸೇರಿ ಅನೇಕ ಮಂದಿ ಕೋಟಿ-ಚೆನ್ನಯರ ಚರಿತ್ರೆ ಬರೆದಿದ್ದಾರೆ. ಇವರೆಲ್ಲರ ಚರಿತ್ರೆಯ ಮೂಲ ಪಡುಮಲೆಯ ಈ ಪುಣ್ಯ ಭೂಮಿಯೇ ಆಗಿದೆ. ಇಂತಹ ಪುಣ್ಯ ಸ್ಥಳ ಕತ್ತಲೆಯಲ್ಲಿರಬಾರದು, ಈ ಪುಣ್ಯಭೂಮಿ ಆರಾಧನಾ ತಾಣವಾಗಿ ಬೆಳಗಬೇಕು. ಮಾನವ ಕುಲಕ್ಕೆ ಕೋಟಿ-ಚೆನ್ನಯರ ಚರಿತ್ರೆಯ ಘಟನೆಗಳ ನೈಜ ಚಿತ್ರಣ ಸಿಗಬೇಕು ಎಂಬ ನೆಲೆಯಲ್ಲಿ ಇಲ್ಲಿ ಅಭಿವೃದ್ಧಿ ಕೆಲಸ ಕಾರ್ಯಗಳು ಆಗುತ್ತಿದೆ ಎಂದರು.
ಕೋವಿಡ್ -19 ಸೋಂಕಿನ ಸಮಸ್ಯೆಯಿಂದಾಗಿ ಕೋಟಿ-ಚೆನ್ನಯರ ಮೂಲಸ್ಥಾನದಲ್ಲಿ ನಡೆಯುತ್ತಿರುವ ಕೆಲಸಗಳಿಗೆ ಸ್ವಲ್ಪಮಟ್ಟಿನ ತಡೆಯಾಗಿದೆ. ಚಿತ್ರನಟ ವಿನೋದ ಆಳ್ವ ಅವರ ಸಹಕಾರ, ಈ ಪುಣ್ಯಭೂಮಿಯ ಭಕ್ತರ ಸಹಕಾರದೊಂದಿಗೆ ಡಿಸೆಂಬರ್ ತಿಂಗಳೊಳಗಡೆ ಇಲ್ಲಿ ನಡೆದ ಯೋಜನೆಗಳ ಉದ್ಘಾಟನೆ ಮಾಡುವ ಗುರಿ ಇದೆ ಎಂದು ಅವರು ತಿಳಿಸಿದರು. ಚಿತ್ರನಟ ವಿನೋದ್ ಆಳ್ವ ಮೂಡಾಯೂರು, ಶ್ರೀಧರ್ ಪಟ್ಲ, ಶೇಖರ್ ನಾರಾವಿ, ಚರಣ್, ಆರ್ ಸಿ ನಾರಾಯಣ್, ಮಾಧವ ಪೂಜಾರಿ, ಸುರೇಶ್ ಆಳ್ವ ಸಾಂತ್ಯ, ಮನೋಜ್ ರೈ ಪೇರಾಲು ಮತ್ತಿತರರು ಇದ್ದರು.