ಪುತ್ತೂರು: ತುಳುನಾಡಿನ ದೈವಾಂಶ ಶಕ್ತಿಗಳಾದ ಕೋಟಿ ಚೆನ್ನಯರು ಕರಾವಳಿಯಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಇಂಥ ಕಾರಣಿಕ ಪುರುಷರ ಹೆಸರನ್ನು ಅರ್ಹವಾಗಿ ಪುತ್ತೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಇರಿಸಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಶೀಘ್ರದಲ್ಲೇ ನಾಮಕರಣ ಸಮಾರಂಭ ಅರ್ಥಪೂರ್ಣವಾಗಿ ನಡೆಸಲಾಗುವುದು ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.
ಶುಕ್ರವಾರ ಸಂಜೆ ಪುತ್ತೂರು ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರಿಗೆ ಸಚಿವರಾದ ಶ್ರೀರಾಮುಲು, ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ವಿ ಸುನಿಲ್ ಕುಮಾರ್, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಎಸ್ ಅಂಗಾರ ಅವರನ್ನು ಆಮಂತ್ರಿಸಿ ಕೆಎಸ್ಆರ್ಟಿಸಿ ವತಿಯಿಂದ ಕಾರ್ಯಕ್ರಮ ಮಾಡಲಾಗುವುದು.
ಪುತ್ತೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರು ಈ ಸಂದರ್ಭದಲ್ಲಿ ನಾಮಫಲಕ ಅಳವಡಿಕೆ, ಅವಳಿ ವೀರರ ಪ್ರತಿಮೆ ಅನಾವರಣ ಮತ್ತು ಕೋಟಿ ಚೆನ್ನಯರ ಸಂಕ್ಷಿಪ್ತ ಇತಿಹಾಸವಿರುವ ಫಲಕ ಅನಾವರಣ ನಡೆಯಲಿದೆ ಎಂದವರು ಹೇಳಿದರು. ಪುತ್ತೂರು ಬಸ್ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರಿಡುವಂತೆ ಪುತ್ತೂರು ಬಿಲ್ಲವ ಸಮಾಜದ ಮುಖಂಡರು ಮತ್ತು ಯುವವಾಹಿನಿ ಮುಖಂಡರು ಮನವಿ ಮಾಡಿದ್ದರು.
ಅದೇ ರೀತಿ ಪಡುಮಲೆ ಸಮಿತಿಯವರು ಕೂಡ ಮನವಿ ಮಾಡಿದ್ದರು. ಈ ವಿಷಯವನ್ನು ನಾನು ನಗರಸಭೆ ಆಡಳಿತದ ಗಮನಕ್ಕೆ ತಂದಿದ್ದೆ. ನಗರಸಭಾಧ್ಯಕ್ಷ ಜೀವಂಧರ ಜೈನ್ ಅವರ ಮುತುವರ್ಜಿಯಿಂದಾಗಿ ನಗರಸಭೆ ಈ ಸಂಬಂಧ ನಿರ್ಣಯ ಅಂಗೀಕರಿಸಿ ಸರ್ಕಾರಕ್ಕೆ ಕಳುಹಿಸಿಕೊಟ್ಟಿತು.
ಅದನ್ನು ನಾನು ಕೆಎಸ್ಆರ್ಟಿಸಿ ಅಧ್ಯಕ್ಷರು ಮತ್ತು ಎಂ.ಡಿ. ಅವರ ಗಮನಕ್ಕೆ ತಂದೆ. ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ನಿರ್ಣಯ ಕೈಗೊಂಡು ಸಾರಿಗೆ ಇಲಾಖೆಗೆ ಕಳುಹಿಸಲಾಯಿತು. ಸಚಿವರಾದ ಶ್ರೀರಾಮುಲು ಅವರು ನನ್ನ ಮನವಿಗೆ ಸ್ಪಂದಿಸಿ ಇಲಾಖೆಯಿಂದ ಅನುಮತಿ ಕೊಡಿಸಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್, ಸಚಿವ ಸುನಿಲ್ ಕುಮಾರ್, ಕೆಎಸ್ಆರ್ಟಿಸಿ ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ಅವರ ಪ್ರಯತ್ನವೂ ಇದರಲ್ಲಿದೆ. ಇವರೆಲ್ಲರನ್ನೂ ನಾನು ಅಭಿನಂದಿಸುತ್ತೇನೆ ಎಂದರು.
ಮೈಸೂರು, ಬೆಂಗಳೂರು ಭಾಗದಿಂದ ನಿತ್ಯ ನೂರಾರು ಪ್ರಯಾಣಿಕರು ಪುತ್ತೂರಿಗೆ ಬರುತ್ತಾರೆ. ಅವರೆಲ್ಲರಿಗೂ ಕೋಟಿ ಚೆನ್ನಯರ ಮಹಿಮೆ, ಇತಿಹಾಸದ ಬಗ್ಗೆ ತಿಳಿಯಲು ಅನುಕೂಲವಾಗಲಿದೆ. 33 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಪುತ್ತೂರು ಬಸ್ ನಿಲ್ದಾಣ ಜಿಲ್ಲೆಯಲ್ಲಿ ಸುಸಜ್ಜಿತ ನಿಲ್ದಾಣವಾಗಿದೆ. ಇದರ ಪ್ರತಿಷ್ಠೆಗೆ ಕೋಟಿ ಚೆನ್ನಯರ ಹೆಸರು ಕೀರ್ತಿ ಶಿಖರವಾಗಲಿದೆ ಎಂದು ಹೇಳಿದ ಮಠಂದೂರು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರು ಇಡಬೇಕು ಎಂಬ ಬೇಡಿಕೆಯಿದೆ. ಅದು ಕೂಡ ಆದಷ್ಟು ಬೇಗ ಈಡೇರಲಿ ಎಂದು ಆಗ್ರಹಿಸುತ್ತಿದ್ದೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷ ಜೀವಂಧರ ಜೈನ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಬಿಜೆಪಿ ಜಿಲ್ಲಾ ಓಬಿಸಿ ಮೋರ್ಚಾ ಅಧ್ಯಕ್ಷ ಆರ್ ಸಿ ನಾರಾಯಣ್, ಪಕ್ಷದ ಪುತ್ತೂರು ಮಂಡಲ ಉಪಾಧ್ಯಕ್ಷರಾದ ಜಯರಾಮ ಪೂಜಾರಿ, ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಕುಮಾರ್ ಶಾಂತಿವನ, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಯುವರಾಜ ಪೆರಿಯತ್ತೋಡಿ, ಓಬಿಸಿ ಮೋರ್ಚಾದ ಪುತ್ತೂರು ಮಂಡಲ ಅಧ್ಯಕ್ಷ ಸುನಿಲ್ ದಡ್ಡು, ಪ್ರಮುಖರಾದ ಹರಿಪ್ರಸಾದ್ ಯಾದವ್ ಉಪಸ್ಥಿತರಿದ್ದರು.
ಇದನ್ನೂ ಓದಿ:ಬುದ್ಧ, ಬಸವ, ಅಂಬೇಡ್ಕರ್, ವಾಲ್ಮೀಕಿ ನಮ್ಮ ಆದರ್ಶ: ಸಿಎಂ ಬೊಮ್ಮಾಯಿ