ಮಂಗಳೂರು:ಇಲ್ಲಿಯವರೆಗೆ ರಾಷ್ಟ್ರ ವಿರೋಧಿ, ಪಾಕಿಸ್ತಾನದ ಪರ ಘೋಷಣೆ ಕೂಗುತ್ತಿದ್ದವರು, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ತಿಳಿದ ಬಳಿಕ ಪ್ರಥಮ ಬಾರಿಗೆ 'ಭಾರತ್ ಮಾತಾ ಕೀ ಜೈ' ಎನ್ನಲು ಆರಂಭಿಸಿದ್ದಾರೆ. ಇದು ನಮ್ಮ ಸಾಧನೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ನಗರದ ಬಂಗ್ರ ಕೂಳೂರಿನಲ್ಲಿ ನಡೆದ ಸಿಎಎ ಪರ ಜನಜಾಗೃತಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇದುವರೆಗೆ ಪಾಕಿಸ್ತಾನದ ಬಾವುಟ ಹಿಡಿದುಕೊಳ್ಳುತ್ತಿದ್ದವರು ಪ್ರಥಮ ಬಾರಿಗೆ ಭಾರತದ ತ್ರಿವರ್ಣ ಧ್ವಜವನ್ನು ಹಿಡಿದುಕೊಂಡಿದ್ದಾರೆ ಇದು ನರೇಂದ್ರ ಮೋದಿಯವರ ಸಾಧನೆ ಎಂದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 72 ವರ್ಷಗಳ ಬಳಿಕ ದೇಶ ಭಕ್ತ ನರೇಂದ್ರ ಮೋದಿಯವರು ಸಂವಿಧಾನದ ಆಶಯಕ್ಕೆ ತಕ್ಕಂತೆ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಿದರು. ಇಲ್ಲಿಂದ ನಮಗೆ ಚಾಲನೆಯ ಆಜ್ಞೆ ದೊರಕಿದೆ. ದ.ಕ, ಉಡುಪಿ, ಕಾಸರಗೋಡು ಜಿಲ್ಲೆಯ ಪ್ರತೀ ಮನೆ ಮನೆಗೆ ಹೋಗಿ ಸಿಎಎ ಕಾಯ್ದೆಯ ಬಗ್ಗೆ ಅರಿವು ಮೂಡಿಸೋಣ. ಸಿಎಎ ಕಾಯ್ದೆಯ ಮೂಲಕ ಭಯೋತ್ಪಾದಕರ ಹುಟ್ಟಡಗಿಸೋಣ ಎಂದರು.
ಕಾಂಗ್ರೆಸ್ ಪಕ್ಷಕ್ಕೆ ಈ ಸಂದರ್ಭದಲ್ಲಿ ಪ್ರಶ್ನಿಸಿದ ಅವರು, ಯಾರು ಮುಗ್ಧರು, ಯಾರು ಅಮಾಯಕರು, ಮುಖಕ್ಕೆ ಬಟ್ಟೆಗಳನ್ನು ಕಟ್ಟಿ ಪೊಲೀಸರಿಗೆ ಕಲ್ಲು ತೂರಾಡಿದವರೇ?. ಶಸ್ತ್ರಾಸ್ತ್ರ ಕೊಠಡಿಯ ಬಾಗಿಲನ್ನು ಒಡೆದವರು ಅಮಾಯಕರೇ?. ಕಾಶ್ಮೀರದಲ್ಲಿರುವ ಉಗ್ರಗಾಮಿಗಳಿಗೆ ಸವಾಲಾಗುವ ರೀತಿಯಲ್ಲಿ ಪ್ರೋತ್ಸಾಹ ನೀಡುವವರಿಗೆ ಕಾಂಗ್ರೆಸಿಗರು ಬೆಂಬಲ ನೀಡುತ್ತಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಅವರು ಪ್ರತಿಕ್ರಿಯಿಸಬೇಕು. ಈಗಲಾದರೂ ರಾಷ್ಟ್ರ ಕಟ್ಟಲು ಒಂದಾಗಿ ನಿಂತು ಪೌರತ್ವ ಕಾಯ್ದೆಯನ್ನು ಬೆಂಬಲಿಸಿ ಎಂದರು.