ಕಡಬ:ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರೊಂದಿಗೆ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ. ಪ್ರತಿಭಾನ್ವಿತ ಶಿಕ್ಷಕರನ್ನೇ ಆಯ್ಕೆ ಮಾಡಿ ಉತ್ತಮ ಶಿಕ್ಷಣ ನೀಡುವ ಕೆಲಸವಾಗುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಮತ್ತು ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ನೂಜಿಬಾಳ್ತಿಲ ಸರ್ಕಾರಿ ಶಾಲಾ ಕಟ್ಟಡದ ಶಿಲಾನ್ಯಾಸ ನೆರವೇರಿಸಿದ ಕೋಟಾ ಶ್ರೀನಿವಾಸ ಪೂಜಾರಿ ಬುಧವಾರ ಕಡಬ ತಾಲೂಕಿನ ನೂಜಿಬಾಳ್ತಿಲ ಉನ್ನತ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು. ರಾಜ್ಯ ಬಜೆಟ್‌ನಲ್ಲಿ ಶೇ. 16ರಿಂದ 17ರಷ್ಟು ಹಣವನ್ನು ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡಲಾಗುತ್ತಿದೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಾ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ ಎಂದರು.
ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ದ.ಕ ಜಿಲ್ಲೆ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದ್ದು, ಇದಕ್ಕೆ ನಮ್ಮ ಹಿರಿಯರ ತ್ಯಾಗ ಹಾಗೂ ಶ್ರಮ ಇದೆ ಎಂದು ಹೇಳಿದರು. ಕೊರೊನಾ ಚಿಕಿತ್ಸೆ ಮತ್ತು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ರಚನೆ ಬಗ್ಗೆ ಮಾಧ್ಯಮ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೊರೊನಾ ಪೀಡಿತ ವ್ಯಕ್ತಿಗಳಿಗೆ ಉಚಿತ ಚಿಕಿತ್ಸಾ ವ್ಯವಸ್ಥೆ ಮುಂದುವರೆದಿದೆ.
ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚುವರಿ ಬಿಲ್ ವಸೂಲಿ ಬಗ್ಗೆ ದೂರುಗಳಿವೆ. ಅಂತವುಗಳು ಕಂಡು ಬಂದರೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವಂತೆ ತಿಳಿಸಿದ್ದಾರೆ. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರ ನೇಮಕದ ಬಗ್ಗೆ ಕೆಲವು ಕಾರ್ಯಗಳು ಬಾಕಿ ಉಳಿದಿದ್ದು, ಕೂಡಲೇ ಇವುಗಳನ್ನು ಸರಿಪಡಿಸಿ ನೇಮಕ ಪ್ರಕ್ರಿಯೆ ನಡೆಯುತ್ತದೆ ಎಂದರು.