ಮಂಗಳೂರು: ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಮತ ಸ್ಫೋಟ ಆಗಿಲ್ಲ. ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ಒಟ್ಟಾಗಿ ಯಡಿಯೂರಪ್ಪನವರ ನೇತೃತ್ವದಲ್ಲಿ ಕೆಲಸಗಳನ್ನು ಮಾಡುತ್ತೇವೆ. ಕೋವಿಡ್ ಸೋಂಕಿನ ವಿರುದ್ಧ ಹಾಗೂ ಬಡವರ ಪರವಾಗಿ ಕೆಲಸ ಮಾಡುವುದು ನಮ್ಮ ಗುರಿ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಯಡಿಯೂರಪ್ಪವರು ದೃಢವಾದ ಹೆಜ್ಜೆ ಇಡುತ್ತಿದ್ದಾರೆ. ನಾವೆಲ್ಲಾ ಪಕ್ಷದ ಸಚಿವರು, ಶಾಸಕರು ಅವರ ಜೊತೆಯಲ್ಲಿ ನಿಂತು ಕೆಲಸ ಮಾಡುತ್ತಿದ್ದೇವೆ. ನಮ್ಮದು ಬಡವರ ಹಾಗೂ ರೈತರ ಪರ ಕಾಳಜಿ ಇರುವಂತಹ ಸರ್ಕಾರ ಎಂದು ಹೇಳಿದರು.
ಜೂ. 1ರಿಂದ ರಾಜ್ಯದ ಎಲ್ಲಾ ದೇವಸ್ಥಾನಗಳಿಗೂ ಭಕ್ತರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಈಗಾಗಲೇ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದ್ದು, ಕೇಂದ್ರದ ಸಹಮತವನ್ನು ನಿರೀಕ್ಷಿಸುತ್ತಿದ್ದೇವೆ. ಸಾಮಾಜಿಕ ಅಂತರ ಕಾಯ್ದುಕೊಂಡು, ಶುಚಿತ್ವದ ಕಡೆಗೆ ಗಮನ ಕೊಟ್ಟು ದೇವಾಲಯ ತೆರೆಯಲು ಯೋಜನೆ ಹಾಕಿಕೊಳ್ಳಲಾಗಿದೆ. ಧಾರ್ಮಿಕ ದತ್ತಿ ಇಲಾಖೆಯ ಮಂತ್ರಿಯಾಗಿ ದೇವಸ್ಥಾನ ತೆರೆಯುವ ಬಗ್ಗೆ ಅಧಿಕೃತವಾದ ಹೇಳಿಕೆ ನೀಡಿದ್ದೆ. ಆಯಾ ಇಲಾಖಾ ಮಂತ್ರಿಗಳು ಈ ಬಗ್ಗೆ ಆದೇಶ ನೀಡಲಿದ್ದಾರೆ. ಅಲ್ಲದೆ ಅಂತಿಮವಾಗಿ ಚರ್ಚ್, ಮಸೀದಿ, ಇತರ ಪ್ರಾರ್ಥನಾ ಮಂದಿರಗಳನ್ನು ತೆರೆಯುವ ಬಗ್ಗೆ ಮುಖ್ಯಮಂತ್ರಿಯವರು ಆದೇಶ ನೀಡಲಿದ್ದಾರೆ. ಕೇಂದ್ರ ಸರ್ಕಾರದ ಅನುಮೋದನೆ ನಿರೀಕ್ಷೆ ಮಾಡುತ್ತಿದ್ದೇವೆ ಎಂದು ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಕೋಟಾ ಶ್ರೀನಿವಾಸ ಪೂಜಾರಿ, ಸಚಿವ ಮೆಸ್ಕಾಂ ವಿದ್ಯುತ್ ದರ ಏರಿಕೆಯ ಬಗ್ಗೆ ಈಗಾಗಲೇ ಮಾತನಾಡಿದ್ದೇವೆ. ಆದರೆ ಇನ್ನೂ ದೂರುಗಳು ಬರುತ್ತಲೇ ಇವೆ. ಆದ್ದರಿಂದ ನಾಳೆ ಮತ್ತೆ ಮೆಸ್ಕಾಂ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಅಂತಿಮ ರೂಪ ತರುತ್ತೇವೆ ಎಂದರು.