ಮಂಗಳೂರು (ದಕ್ಷಿಣ ಕನ್ನಡ): ಕೆಎಸ್ಆರ್ಟಿಸಿ ನರ್ಮ್ ಬಸ್ಗಳ ಬಗ್ಗೆ ಮಾಹಿತಿ ಪಡೆದು 42 ನರ್ಮ್ ಬಸ್ಗಳು ಜಿಲ್ಲೆಯಲ್ಲಿ ಕಾರ್ಯಾಚರಣೆ ಪ್ರಾರಂಭಿಸಲಿ. ಎಲ್ಲಿ ಅಗತ್ಯವಿದೆಯೋ ಅಲ್ಲಿಗೆ ಒಂದೊಂದೇ ಬಸ್ಗಳನ್ನು ರೋಡಿಗಿಳಿಸಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಸೂಚಿಸಿದರು.
ಜಿಲ್ಲೆಯಲ್ಲಿ ನರ್ಮ್ ಬಸ್ ಆರಂಭಿಸಲು ಕೋಟ ಶ್ರೀನಿವಾಸ್ ಪೂಜಾರಿ ಸಲಹೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನರ್ಮ್ ಬಸ್ಗಳು ಕಾರ್ಯಾಚರಣೆ ಮಾಡಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಸಲಹೆ ನೀಡಿದ್ದಾರೆ. ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೆಎಸ್ಆರ್ಟಿಸಿ ಅಧಿಕಾರಿಗಳ ಸಭೆಯಲ್ಲಿ ಈ ಸಲಹೆ ನೀಡಿದ್ದು, ಜಿಲ್ಲೆಯ ಅಗತ್ಯ ಮಾರ್ಗಗಳಿಗೆ ಸಂಚಾರ ಆರಂಭಿಸಲಿ ಎಂದು ಸಲಹೆ ನೀಡಿದರು.
ಬಳಿಕ ಕೆಎಸ್ಆರ್ಟಿಸಿ ಅಧಿಕಾರಿಗಳು ಮಾತನಾಡಿ, ಇಂದಿನಿಂದ 40 ಕೆಎಸ್ಆರ್ಟಿಸಿ ಬಸ್ಗಳ ಸಂಚಾರ ಪ್ರಾರಂಭವಾಗಿದ್ದು, ಎಲ್ಲ ಬಸ್ಗಳಲ್ಲಿ ಪ್ರಯಾಣಿಕರಿಗೆ ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಲು ಸೂಚಿಸಲಾಗಿದೆ. ಸ್ಯಾನಿಟೈಸರ್ ಅನ್ನು ಬಸ್ ನಿರ್ವಾಹಕರ ಕೈಯಲ್ಲಿ ನೀಡಲಾಗಿದ್ದು, ಪ್ರಯಾಣಿಕರು ಬಸ್ ಪ್ರವೇಶಿಸುವ ಮೊದಲು ಬಳಸುವಂತೆ ಕ್ರಮ ವಹಿಸಲಾಗಿದೆ.
ಈ ವೇಳೆ, ಟಿಕೆಟ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಮಾಹಿತಿ ನೀಡಿದರು. ಈ ಸಂದರ್ಭ ಅಪರ ಜಿಲ್ಲಾಧಿಕಾರಿ ರೂಪಾ ಎಂ.ಜೆ, ಎಸ್.ಪಿ. ಲಕ್ಷ್ಮೀಪ್ರಸಾದ್, ಮಹಾನಗರಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗಡೆ ಹಾಗೂ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.