ಮಂಗಳೂರು: ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಸೇರಿದ ದೇವಾಲಯಗಳ ಕಲ್ಯಾಣಿಗಳನ್ನು ಜಲಾಭಿಷೇಕ ಯೋಜನೆಯಡಿ ಜೀರ್ಣೋದ್ಧಾರಗೊಳಿಸುವ ಯೋಜನೆ ರೂಪಿಸಲಾಗಿದೆ. ಈ ಮೂಲಕ ದೇವಾಲಯಗಳಲ್ಲಿ ಅಭಿಷೇಕಕ್ಕೆ ಉಪಯೋಗಿಸುವ ಕಲ್ಯಾಣಿಯ ನೀರು ಶುದ್ಧವಾಗಿರಿಸುವ ಉದ್ದೇಶದಿಂದ ಈ ಯೋಜನೆ ಕೈಗೊಳ್ಳಲಾಗಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ ತಮ್ಮ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ದೇವಾಲಯಗಳ ನಿಧಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗೂ ಸಾರ್ವಜನಿಕರು ಉದಾರವಾಗಿ ನೀಡುವ ಹಣವನ್ನು ಕಲ್ಯಾಣಿ ಜೀರ್ಣೋದ್ಧಾರಕ್ಕೆ ಬಳಸಲಾಗುವುದು ಎಂದರು.
ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ 34,562 ದೇವಾಲಯಗಳ ಕೋಟ್ಯಂತರ ರೂ. ಬೆಲೆಬಾಳುವ ಚರ ಮತ್ತು ಸ್ಥಿರ ಆಸ್ತಿಗಳನ್ನು ಸಂರಕ್ಷಣೆ ಮಾಡಲು ಹಾಗೂ ದೈನಂದಿನ ಕಾರ್ಯ ಚಟುವಟಿಕೆಗಳು ಸುಗಮವಾಗಿ ನಡೆಯಲು ಇ-ಆಫೀಸ್ ಅಥವಾ ಇ-ಆಡಳಿತ ಯೋಜನೆಗಳನ್ನು ಅಳವಡಿಸಲಾಗುವುದು. ಇದಕ್ಕೆ ತಗಲುವ ವೆಚ್ಚವನ್ನು ಸಾಮಾನ್ಯ ಸಂಗ್ರಹಣಾ ನಿಧಿಯಿಂದ ಭರಿಸಲಾಗುತ್ತದೆ ಎಂದು ತಿಳಿಸಿದರು.
ಮುಜಾರಾಯಿ ಹಾಗೂ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ಎಲ್ಲ 'ಎ' ವರ್ಗದ ದೇವಾಲಯಗಳ ವ್ಯವಸ್ಥಾಪನಾ ಸಮಿತಿಯ ಅವಧಿ ಮಾರ್ಚ್ ತಿಂಗಳಿಗೆ ಮುಕ್ತಾಯಗೊಳ್ಳಲಿದೆ. ಆದ್ದರಿಂದ ಒಟ್ಟು 28 ದೇವಾಲಯಗಳಿಗೆ ಹೊಸದಾಗಿ ವ್ಯವಸ್ಥಾಪನಾ ಸಮಿತಿ ರಚಿಸಲು ಸಾರ್ವಜನಿಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಸಚಿವರು ಹೇಳಿದರು.
ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ 'ಸಿ' ದರ್ಜೆಯ ದೇವಾಲಯಗಳಿಗೆ ವೇದ ಹಾಗೂ ಆಗಮ ಶಾಸ್ತ್ರದ ವಿದ್ಯಾಭ್ಯಾಸವನ್ನು ಇಲಾಖೆಯ ವತಿಯಿಂದ ಒದಗಿಸಲು ಉದ್ದೇಶಿಸಲಾಗಿದೆ. ಆದ್ದರಿಂದ ಆರ್ಥಿಕವಾಗಿ ಸಬಲವಾಗಿರುವ ಮತ್ತು ಸ್ಥಳಾವಕಾಶವಿರುವ ದೇವಾಲಯಗಳಲ್ಲಿ ಸಂಸ್ಕೃತ, ವೇದ ಹಾಗೂ ಆಗಮ ಶಾಸ್ತ್ರಗಳ ಪಾಠಶಾಲೆಗಳನ್ನು ತೆರೆಯಲು ಯೋಜನೆ ಕೈಗೊಳ್ಳಲಾಗಿದೆ. ಸಂಸ್ಕೃತ, ವೇದ ಹಾಗೂ ಆಗಮ ಶಾಸ್ತ್ರಗಳ ಶಿಕ್ಷಣವನ್ನು ಐದು ವರ್ಷಗಳ ಕಾಲಾವಧಿಗೆ ಸೀಮಿತಗೊಳಿಸಲಾಗಿದೆ. ಈ ಬಗ್ಗೆ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು, ಅಧಿಕಾರಿಗಳು ಸಮಿತಿಯನ್ನು ರಚಿಸಿ ಆದಷ್ಟು ಬೇಗ ಕಾರ್ಯಯೋಜನೆಯು ರೂಪಿಸಬೇಕೆಂದು ಆದೇಶಿಸಲಾಗಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದರು.