ಬಂಟ್ವಾಳ: ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಪಚ್ಚಿನಡ್ಕದಲ್ಲಿ ಶಿಲಾಮಯ ಕೊರಗಜ್ಜನ ಗುಡಿಯೊಂದು ಕೇವಲ 8 ದಿನಗಳಲ್ಲಿ ಸಿದ್ಧಗೊಂಡು ಗಮನ ಸೆಳೆದಿದೆ.
ಸಾಮಾನ್ಯವಾಗಿ ಶಿಲಾಮಯ ಗುಡಿ ನಿರ್ಮಾಣ ಮಾಡಬೇಕಾದರೆ ಹೆಚ್ಚಿನ ಸಮಯ ಬೇಕಿದ್ದು, ಶಿಲ್ಪಿ ಹೇಳುವ ಪ್ರಕಾರ ಇಂತಹ ಗುಡಿ ನಿರ್ಮಾಣವಾಗಬೇಕಾದರೆ ಕನಿಷ್ಠ ಒಂದು ತಿಂಗಳಾದರೂ ಬೇಕಾಗುತ್ತದೆ. ಆದರೆ, ಈ ಗುಡಿಯ ಕಲ್ಲಿನ ಕಾರ್ಯ ಬರೀ 8 ದಿನಗಳಲ್ಲಿ ಪೂರ್ಣಗೊಂಡಿದ್ದು, 9ನೇ ದಿನ ಛಾವಣಿಯ ಕಾರ್ಯವೂ ಪೂರ್ಣಗೊಂಡಿದೆ.
ಬಂಟ್ವಾಳದ ವಾಸ್ತುಶಿಲ್ಪಿ ಬಸ್ತಿ ಸದಾಶಿವ ಶೆಣೈ ಅವರ ನೇತೃತ್ವದಲ್ಲಿ ಇದರ ಕಾರ್ಯ ನಡೆದಿದ್ದು, ಹಿರಿಯರಾದ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ ಅವರ ಮುಂದಾಳತ್ವ ವಹಿಸಿದ್ದರು. ಕಲ್ಲಿನ ಕೆಲಸ ಮೇಸ್ತ್ರಿ ರಮೇಶ್ ಆರ್.ಲಾಯಿಲಾ ಹಾಗೂ ನಾಗೇಂದ್ರ ಆಚಾರ್ಯ ಬಂಟ್ವಾಳ ಅವರು ಮರದ ಕಾರ್ಯ ನಿರ್ವಹಿಸಿದ್ದಾರೆ.
8 ದಿನಗಳಲ್ಲಿ ಸಿದ್ಧಗೊಂಡ ಕೊರಗಜ್ಜನ ಗುಡಿ ಜ. 11ರಂದು ಕಾಮಗಾರಿ ಆರಂಭಗೊಂಡಿದ್ದು, ಜ.18ಕ್ಕೆ ಶಿಲೆಯ ಕೆಲಸಗಳು ಪೂರ್ಣಗೊಂಡಿದ್ದವು. ಜ. 19ರಂದು ಮೇಲ್ಛಾವಣಿಯ ಕೆಲಸ ಕೂಡ ಪೂರ್ಣಗೊಂಡಿದೆ. ಸರಾಸರಿ 8 ಮಂದಿ ಕೆಲಸಗಾರರು ಕಾಮಗಾರಿ ನಿರ್ವಹಿಸಿದ್ದು, 2 ದಿನಗಳು ಮಾತ್ರ ರಾತ್ರಿ ಕಾಮಗಾರಿ ನಡೆಸಿದ್ದಾರೆ. ಶಿಲಾಮಯ ಗುಡಿಗಳು ಕನಿಷ್ಠ ಅವದಿಯಲ್ಲಿ ಪೂರ್ಣಗೊಳ್ಳುವುದು ಅಪರೂಪವಾಗಿದ್ದು, ಆದರೆ ಇಲ್ಲಿ ಎಂಟು ಅಡಿ ಸುತ್ತಳತೆಯ 10 ಅಡಿ 4 ಇಂಚು ಉದ್ದದ ಕಲ್ಲಿನ ಗುಡಿ ನಿರ್ಮಾಣವಾಗಿದೆ.
ತಾನು ಅನೇಕ ದೇವಸ್ಥಾನಗಳ ಕೆಲಸ ನಿರ್ವಹಿಸಿದ್ದು, ಇಷ್ಟು ಕನಿಷ್ಠ ಅವಧಿಯಲ್ಲಿ ಕೆಲಸ ಮುಗಿಸಿರುವುದು ಇದೇ ಮೊದಲು. ಹಿಂದೊಮ್ಮೆ ಬಂಟ್ವಾಳದಲ್ಲಿ 24 ದಿನಗಳಲ್ಲಿ ಇಂತಹ ಗುಡಿ ನಿರ್ಮಿಸಿದ್ದೆವು ಎಂದು ವಾಸ್ತುಶಿಲ್ಪಿ ಬಸ್ತಿ ಸದಾಶಿವ ಶೆಣೈ ಹೇಳುತ್ತಾರೆ.