ಮಂಗಳೂರು: ಇಲ್ಲಿನ ಜಿಲ್ಲಾ ನ್ಯಾಯಾಲಯದ ಪಾರ್ಕಿಂಗ್ ಪ್ರದೇಶದಲ್ಲಿ ಜುಲೈ 12 ರಂದು ಕಂಡು ಬಂದ ರಕ್ತದ ಕಲೆ ಸಾಕಷ್ಟು ಅನುಮಾನ ಹಾಗೂ ಕುತೂಹಲಕ್ಕೆ ಕಾರಣವಾಗಿತ್ತು. ಸದ್ಯ ಈ ಎಲ್ಲ ಅನುಮಾನಗಳಿಗೆ ಬುಧವಾರ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ತೆರೆ ಎಳೆದಿದೆ.
ಕೋರ್ಟ್ ಆವರಣದಲ್ಲಿ ರಕ್ತದ ಕಲೆ ಪತ್ತೆ ಪ್ರಕರಣ.. ನಿಗೂಢತೆಗೆ ತೆರೆ ಎಳೆದ ವಿಧಿವಿಜ್ಞಾನ ಪ್ರಯೋಗಾಲಯ - undefined
ಮಂಗಳೂರು ಜಿಲ್ಲಾ ನ್ಯಾಯಾಲಯದ ಪಾರ್ಕಿಂಗ್ ಪ್ರದೇಶದಲ್ಲಿ ಕಂಡುಬಂದಿದ್ದ ನಾಯಿಯ ರಕ್ತದ ಕಲೆ ಎಂದು ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ದೃಢಪಟ್ಟಿದೆ.
ನ್ಯಾಯಾಲಯದ ಬಳಿ ಇರುವ ವಾಹನ ಪಾರ್ಕಿಂಗ್ ಸ್ಥಳದಲ್ಲಿ ರಕ್ತದ ಕಲೆಯನ್ನು ಕಸ ಗುಡಿಸುವವರು ನೋಡಿ, ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಅಲ್ಲದೆ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ವಕೀಲರೊಬ್ಬರ ಸ್ಕಾರ್ಪಿಯೊ ವಾಹನದ ಮೇಲೆ ಸಹ ರಕ್ತದ ಕಲೆ ಪತ್ತೆಯಾಗಿತ್ತು. ಸುತ್ತಮುತ್ತಲಿನ 30 ಮೀ ದೂರದಲ್ಲೂ ರಕ್ತದ ಕಲೆ ಕಂಡುಬಂದಿತ್ತು. ಮಂಗಳೂರು ಉತ್ತರ (ಬಂದರು) ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ರಕ್ತದ ಮಾದರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದರು. ಅಲ್ಲಿನ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಆ ಸ್ಥಳ ಕ್ಯಾಮರಾ ವ್ಯಾಪ್ತಿಗೆ ಬರುತ್ತಿರಲಿಲ್ಲವಾದ್ದರಿಂದ ಪ್ರಕರಣದ ಸುತ್ತ ಹಲವಾರು ಅನುಮಾನಗಳು ಹುಟ್ಟಿಕೊಂಡಿದ್ದವು. ಪೊಲೀಸರು ಕೂಡ ಸಂಜೆ ತನಕ ಅಲ್ಲಿಯೇ ನಿಂತು ವಿವಿಧ ಕೋನಗಳಲ್ಲಿ ತನಿಖೆ ನಡೆಸಿದ್ದರು.
ವಿವಿಧ ಆಸ್ಪತ್ರೆಗಳಲ್ಲಿ ಗಾಯಾಳುಗಳು ಯಾರಾದರೂ ದಾಖಲಾಗಿದ್ದಾರೆಯೇ ಎನ್ನುವ ಬಗ್ಗೆಯೂ ತನಿಖೆ ನಡೆಸಿದ್ದರು. ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿದಾಗ ನ್ಯಾಯಾಲಯದ ಆವರಣದಲ್ಲಿ ಪತ್ತೆಯಾದ ರಕ್ತ ನಾಯಿಯದ್ದು ಎಂದು ದೃಢಪಟ್ಟಿದೆ. ವರದಿಯ ಪ್ರತಿಯನ್ನು ಪೊಲೀಸ್ ಆಯುಕ್ತರಿಗೆ ನೀಡಿದ್ದು, ರಕ್ತದ ಕಲೆಯ ಸುತ್ತ ಹುಟ್ಟಿಕೊಂಡಿದ್ದ ಹಲವು ಶಂಕೆಗಳಿಗೆ ಉತ್ತರ ದೊರೆತಿದೆ.