ಉಳ್ಳಾಲ (ದಕ್ಷಿಣ ಕನ್ನಡ): ಕಲ್ಲಾಪು ಬುರ್ದುಗೋಳಿ ಶ್ರೀ ಗುಳಿಗ ಕೊರಗಜ್ಜ ಉದ್ಭವಶಿಲೆ ಆದಿಸ್ಥಳಕ್ಕೆ 'ಕೊರಗಜ್ಜ' ಚಿತ್ರತಂಡ ಇತ್ತೀಚೆಗೆ ಭೇಟಿ ನೀಡಿತ್ತು. ಸಿನಿಮಾದ ಯಶಸ್ಸಿಗಾಗಿ ತಾವು ನೀಡಿದ್ದ ಹರಕೆಯ ಕೋಲದಲ್ಲಿ ಭಾಗವಹಿಸಿತ್ತು. ನಟಿಯರಾದ ಶೃತಿ ಮತ್ತು ಭವ್ಯ ಕೋಲದಲ್ಲಿ ಭಾಗಿಯಾಗಿ ಅಜ್ಜನ ಕೋಲ ವೀಕ್ಷಿಸಿದರು.
ನಟಿ ಭವ್ಯ ಮಾತನಾಡಿ, ಕಳೆದ ಹುಟ್ಟುಹಬ್ಬದ ಸಂದರ್ಭದಲ್ಲೂ ಕ್ಷೇತ್ರಕ್ಕೆ ಭೇಟಿ ನೀಡಿದ್ದೆ. ಈ ಬಾರಿಯೂ ದೈವದ ಇಚ್ಛೆಯಂತೆ ಅದೇ ದಿನ ಭೇಟಿ ನೀಡಿದ್ದೇನೆ. ಕೊರಗಜ್ಜನ ಆಶೀರ್ವಾದ ಮತ್ತು ಪವಾಡದಿಂದ ಇದು ಸಾಧ್ಯವಾಗಿದೆ. ಕೊರಗಜ್ಜ ಚಿತ್ರದಲ್ಲಿ ಪಂಜಂದಾಯ ಪಾತ್ರ ನಿರ್ವಹಿಸಿರುವೆ. ಅದ್ಭುತ ಕಲಾವಿದರನ್ನೊಳಗೊಂಡ ಯಶಸ್ಸಿನ ಚಿತ್ರವಾಗಿ ನಮ್ಮ ಸಿನಿಮಾ ಹೊರಹೊಮ್ಮಲಿದೆ. ಕೊರಗಜ್ಜನ ದಯೆಯಿಂದ ಚಿತ್ರದ ಪ್ರತೀ ಕೆಲಸ ಕಾರ್ಯಗಳು ಪವಾಡದ ರೀತಿಯಲ್ಲಿ ನಡೆದು ಬಂದಿದೆ ಎಂದು ತಿಳಿಸಿದರು.
ನಟಿ ಶೃತಿ ಮಾತನಾಡಿ, ಹಣ ಇದ್ದವರು ಸಿನಿಮಾ ಮಾಡಲು ಸಾಧ್ಯವಿಲ್ಲ. ದೇವರ ಅನುಗ್ರಹದಿಂದಷ್ಟೇ 'ಕೊರಗಜ್ಜ' ಸಿನಿಮಾ ಮಾಡಿರುವುದು ನಮಗೆ ಸಿಕ್ಕ ಅನುಭವದಿಂದ ಕಂಡುಬಂದ ಸತ್ಯ. ಚಿತ್ರದ ಶೂಟಿಂಗ್ ಉದ್ದಕ್ಕೂ ಒಳ್ಳೆ ವಿಚಾರಗಳೇ ತುಂಬಿರುವುದು ದೈವದ ಅನುಗ್ರಹ. ಈ ಸಿನಿಮಾ ತೆರೆಮರೆಯಲ್ಲಿದ್ದ ಕಲಾವಿದರನ್ನು ಕೂಡ ಸೂಕ್ತವಾಗಿ ತೆಗೆದುಕೊಂಡು ಹೋಯಿತು. ಬಹು ನಿರೀಕ್ಷೆಯಲ್ಲಿರುವ ಸಿನಿಮಾಗಳಲ್ಲಿ ಕೊರಗಜ್ಜನ ಚಿತ್ರವೂ ಸೇರಿದೆ ಎಂದು ತಿಳಿಸಿದರು.
ನಿರ್ದೇಶಕ ಸುಧಿರ್ ರಾಜ್ ಅತ್ತಾವರ ಮಾತನಾಡಿ, ತುಳುನಾಡಿನ ದೈವಾರಾಧನೆಯ ವೇಷಭೂಷಣಗಳು ಉತ್ತರ ಸೈಬೀರಿಯಾದ 'ಷಮನಿಸಂ'ನಲ್ಲೂ ಇದೆ. ರಷ್ಯಾ ಪ್ರಾಂತ್ಯದಿಂದ ಬಂದಿರುವ ಜನಪದೀಯ ಕಲೆಯಾಗಿದ್ದು, ಬೌದ್ಧ ಧರ್ಮದಲ್ಲಿ ಷಮನ್ಸ್ ಎನ್ನಲಾಗುತ್ತದೆ. ಆಫ್ರಿಕನ್ನರು, ರಷ್ಯನ್ನರು, ಆಸ್ಟ್ರೇಲಿಯ, ಮೆಕ್ಸಿಕೋದಲ್ಲಿ ಇಂತಹ ವೇಷಭೂಷಣಗಳನ್ನು ಹಾಕಿಕೊಂಡು ಸಾವಿರಾರು ವರ್ಷಗಳಿಂದ ಅಗೋಚರ ಶಕ್ತಿಗಳನ್ನು ಮೈಮೇಲೆ ಆಹ್ವಾನಿಸಿಕೊಂಡು ಭವಿಷ್ಯ ಮತ್ತು ಮುಂದೆ ಘಟಿಸಬಹುದಾದ ವಿಚಾರಗಳನ್ನು ಹೇಳುವ ಶಕ್ತಿಗಳಿವೆ. ದ.ಕ ಮಾತ್ರವಲ್ಲ, ಕೇರಳ, ಅಸ್ಸಾಂ ಸೇರಿದಂತೆ ಪ್ರಪಂಚದಾದ್ಯಂತ ಈ ಕಲೆಯಿದೆ. ಹಾಗಾಗಿ, ಒಂದು ಸಮಾಜದ, ಸಮುದಾಯದ ಕಲೆ ಎನ್ನುವುದು ಸಮಂಜಸವಲ್ಲ. ನಂಬಿಕೆಗಳಿಗೆ ಧಕ್ಕೆಯಾಗದಂತೆ ವೇಷಭೂಷಣಗಳನ್ನು ಅಭಾಸ ರೀತಿಯಲ್ಲಿ ಮಾಡುವುದು ತಪ್ಪು. ಚಿತ್ರದ ಶೂಟಿಂಗ್ ವೇಳೆ ತೊಂದರೆಗಳಾಗದಂತೆ ಗುಳಿಗ, ಕಲ್ಲುರ್ಟಿಗೆ ಗುಡಿ ಕಟ್ಟಿಯೇ ಮುಂದುವರಿದಿದ್ದೇವೆ. ವಿದ್ಯೆ ತಿಳಿದವರಲ್ಲಿ ಕೇಳಿಕೊಂಡು ಶೂಟಿಂಗ್ ನಡೆಸಲಾಗಿದೆ. ಮಾರ್ಚ್ ಕೊನೆಗೆ ಸಿನಿಮಾ ತೆರೆಕಾಣಲಿದೆ ಎಂದು ಮಾಹಿತಿ ನೀಡಿದರು.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ನಿರ್ಮಾಣಗೊಳ್ಳುತ್ತಿದೆ. ಹಿಂದಿ, ತೆಲುಗು, ತಮಿಳು, ಮಲಯಾಳಂ, ಕನ್ನಡ ಹಾಗೂ ತುಳು ಭಾಷೆಗಳಲ್ಲಿಯೂ ಚಿತ್ರ ತೆರೆಕಾಣಲಿದೆ. ದೈವಿಶಕ್ತಿಯೇ ನಮ್ಮ ಚಿತ್ರವನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುವ ಧೈರ್ಯವಿದೆ. ತಾಂತ್ರಿಕವಾಗಿ 'ಪುಷ್ಪ'ದಂತಹ ದೊಡ್ಡ ಸಿನಿಮಾ ನಿರ್ವಹಿಸಿದ ಬಿಪಿನ್ ದೇವ್ ಸೌಂಡ್ ಡಿಸೈನ್ ಮಾಡುತ್ತಿದ್ದು, ಮಲಯಾಳಂನ ಬಹುದೊಡ್ಡ ಎಡಿಟರ್ ಗೀತ್ ಜೋಷಿ ಎಡಿಟಿಂಗ್ ತಂಡದ ನೇತೃತ್ವ ವಹಿಸಿದ್ದಾರೆ. ಒ.ಬಿ ಸುಂದರ್ ಸಂಗೀತ ನಿರ್ದೇಶನ ಹಾಗೂ ಹಿನ್ನೆಲೆ ಸಂಗೀತವನ್ನು ನೀಡುತ್ತಿದ್ದಾರೆ. ಕೊಚ್ಚಿ, ಮುಂಬೈನಲ್ಲಿ ಪೋಸ್ಟ್ ಪ್ರೊಡಕ್ಷನ್ ನಡೆಯುತ್ತಿದೆ. ಸಿನಿಮಾದ ಬಗೆಗಿನ ಕುತೂಹಲವನ್ನು ದೊಡ್ಡ ಸಾಧಕರು ಸಹ ಪ್ರಶ್ನಿಸುತ್ತಿದ್ದಾರೆ ಎಂದು ತಿಳಿಸಿದರು.
ಹರಕೆ ಕೋಲ ಕೊಟ್ಟ 'ಕೊರಗಜ್ಜ' ಚಿತ್ರತಂಡ ಇದನ್ನೂ ಓದಿ:ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸಲಾರ್ ಚಿತ್ರ ತಂಡ ಭೇಟಿ - ವಿಡಿಯೋ
ತ್ರಿವಿಕ್ರಮ್ ಸಪಲ್ಯ ಎನ್ನುವ ನಿರ್ಮಾಪಕರಿಂದಾಗಿ ಐದು ಕ್ಯಾಮರಾ ಬಳಸಿ ಶೂಟಿಂಗ್ ನಡೆಸಲು ಸಾಧ್ಯವಾಗಿದೆ. ಭರತ್ ಕೊರಗತನಿಯ ಪಾತ್ರ ನಿರ್ವಹಿಸುತ್ತಿದ್ದು, ಕೃತಿಕಾ ಎನ್ನುವ ಅದ್ಭುತ ಪ್ರತಿಭೆ ಕೊರಗಜ್ಜನ ತಾಯಿ ಕೊರಪೊಳು ಪಾತ್ರ ಮಾಡುತ್ತಿದ್ದಾರೆ. ಚಿತ್ರಕ್ಕೆ 'ಕೊರಗಜ್ಜ' ಎಂದು ಹೆಸರಿಡಲಾಗಿದೆ. ಕೊರ್ರೆ ಕೊಡ್ತಾರ್ ಕೊರಗತನಿಯ ಎಂದು ಕೊರಗ ಭಾಷೆಯಲ್ಲಿ ಟ್ಯಾಗ್ ಲೈನ್ ನೀಡಲಾಗಿದೆ. 800 ವರ್ಷಗಳಿಂದ ಗೌಪ್ಯವಾಗಿಟ್ಟಂತಹ ಕಥೆಯನ್ನು ಸಮುದಾಯದವರು ಎಲೆಹಾರಿಸಿ ನಂತರ ಸಿಕ್ಕ ಸಮ್ಮತಿಯಂತೆ ಕಥೆ ಹೇಳಿದ್ದಾರೆ. ಚಿತ್ರಕ್ಕೆ ತಪ್ಪು ಕಲ್ಪನೆಗಳಿಂದ ವಿರೋಧಗಳಿತ್ತು. ಕಳಸದಲ್ಲಿ ಶೂಟಿಂಗ್ ನಡೆಯುತ್ತಿದ್ದ ಸಂದರ್ಭ ತಡೆಯೊಡ್ಡಿದ ಪರಿಣಾಮ 35 ಲಕ್ಷ ರೂ. ನಷ್ಟ ಉಂಟಾಯಿತು. ಹಿಂದೆ ಇರುವ ವ್ಯಕ್ತಿಯೊಬ್ಬರು ತಡೆಹಿಡಿಯಲು ನೋಡುತ್ತಿದ್ದಾರೆ. ಕಾಂತಾರ-2 ಚಿತ್ರಕ್ಕೂ ಅದೇ ರೀತಿಯ ಅಡ್ಡಿ ಉಂಟು ಮಾಡಲಾಗುತ್ತಿದೆ. ನಮ್ಮ ನೆಲದ ದೈವಿಶಕ್ತಿಯ ಸಿನಿಮಾ ಮಾಡಿದಾಗ ತಡೆ ಮಾಡುವುದರಲ್ಲಿ ಅರ್ಥವಿಲ್ಲ ಎಂದು ತಿಳಿಸಿದರು.
ಕಲ್ಲಾಪು ಬುರ್ದುಗೋಳಿ ಶ್ರೀ ಗುಳಿಗ ಕೊರಗಜ್ಜ ಉದ್ಭವಶಿಲೆ ಆದಿಸ್ಥಳದಲ್ಲಿ ನಡಯಿತು ಕೋಲ ಇದನ್ನೂ ಓದಿ:ಮತ್ಸ್ಯಗಂಧ ಚಿತ್ರದಿಂದ ಸಂಗೀತ ನಿರ್ದೇಶಕನಾದ ನಟ ಪ್ರಶಾಂತ್ ಸಿದ್ದಿ
ನಿರ್ಮಾಪಕ ತ್ರಿವಿಕ್ರಮ ಸಪಲ್ಯ, ಸಹ ನಿರ್ಮಾಪಕ ವಿದ್ಯಾಧರ್ ಶೆಟ್ಟಿ, ನಟಿ ಭವ್ಯ ಪುತ್ರಿ ಅದಿತಿ, ನಟಿ ಶ್ರುತಿ ಮಗಳು ಗೌರಿ, ನಾಯಕ ನಟ ಭರತ್ ಸೂರ್ಯ, ನಾಯಕ ನಟಿ ರಿತಿಕ, ಬಾಲ ನಟರುಗಳಾದ ಸುಧಾ, ನವನೀತ, ಶ್ರೀಹರಿ, ಬುರ್ದುಗೋಳಿ ಕ್ಷೇತ್ರದ ಅಧ್ಯಕ್ಷ ವಿಶ್ವನಾಥ್ ನಾಯಕ್, ಉಪಾಧ್ಯಕ್ಷ ದೇವದಾಸ್ ಗಟ್ಟಿ ಕಾಯಂಗಳ, ಬಿಜೆಪಿ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ವಕೀಲ ಗಂಗಾಧರ್ ಉಳ್ಳಾಲ್, ಪುರುಷೋತ್ತಮ್ ಕಲ್ಲಾಪು ಕೋಲದಲ್ಲಿ ಉಪಸ್ಥಿತರಿದ್ದರು.