ಕಡಬ (ದಕ್ಷಿಣ ಕನ್ನಡ):ಸಾಲು ಸಾಲು ಗುಡ್ಡಗಳಿಗೆ ಪ್ರಕೃತಿಯ ಹಚ್ಚ ಹಸಿರಿನ ಹೊದಿಕೆ. ನೋಡುಗರನ್ನು ತನ್ನತ್ತ ಸೆಳೆಯುವ ಪ್ರಾಕೃತಿಕ ಸೌಂದರ್ಯ ತಾಣ. ಕಡಬ ತಾಲೂಕಿನ ಕೊಯಿಲ ಗ್ರಾಮದಲ್ಲಿನ ಸರ್ಕಾರಿ ಫಾರ್ಮ್ ಗುಡ್ಡಗಳ ದೃಶ್ಯಗಳು... ಆದರೆ ಪರಿಸರವನ್ನು ಕಿಡಿಗೇಡಿಗಳು ದುರ್ಬಳಕೆ ಮಾಡಿಕೊಂಡು ಹಾಳುಗೆಡವುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ಕೊಯಿಲ ಫಾರ್ಮ್ ಹೌಸ್ ಸಂಕಷ್ಟ ನಿಷೇಧಿತ ಪ್ರದೇಶವಾದರೂ ಇಲ್ಲಿನ ಗುಡ್ಡದಲ್ಲಿ ಅಲ್ಲಲ್ಲಿ ಮದ್ಯದ ಬಾಟಲ್‍ಗಳು, ಅನೈತಿಕ ಚಟುವಟಿಕೆಗಳಿಗೆ ಬಳಕೆಯಾಗುವ ವಸ್ತುಗಳು ಕಾಣಸಿಗುತ್ತಿವೆ. ಇಲ್ಲಿನ ನೈಜತೆಯನ್ನು ಹಾಳುಗೆಡುವುತ್ತಿರುವುದು ಪ್ರಜ್ಞಾವಂತ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸುಮಾರು 704 ಎಕರೆಯಲ್ಲಿ ಹರಡಿಕೊಂಡಿರುವ ಕೊಯಿಲ ಪಶುಸಂಗೋಪನಾ ಇಲಾಖೆ ಒಂದು ಕಾಲದಲ್ಲಿ ರಾಜ್ಯದಲ್ಲೇ ಹೆಸರು ಪಡೆದಿತ್ತು. ಆದರೆ ಈ ಫಾರ್ಮ್ನ ಈಗಿನ ಪರಿಸ್ಥಿತಿ ಬೇಸರ ತರಿಸುಸುವಂತಿದೆ.
ಇಲ್ಲಿಗೆ ಅಕ್ರಮವಾಗಿ ಭೇಟಿ ನೀಡಿದ ಯಾರೋ ಕಿಡಿಗೇಡಿಗಳು ಪ್ರಾಕೃತಿಕ ಸೌಂದರ್ಯದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದರಿಂದ ಗಂಡಿಬಾಗಿಲು, ಆನೆಗುಂಡಿ ಮೊದಲಾದ ಪ್ರದೇಶಗಳಲ್ಲಿದ್ದ ಸುರಕ್ಷತಾ ಬೇಲಿಗಳನ್ನು ಕಿತ್ತು ದುಷ್ಕರ್ಮಿಗಳು ಒಳ ಪ್ರವೇಶಿಸಿ ಮೋಜು-ಮಸ್ತಿ ಮಾಡಲು ಆರಂಭಿಸಿದ್ದಾರೆ.
ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಗೋಕುಲನಗರ ಎಂಬಲ್ಲಿ ಈ ಸರ್ಕಾರಿ ಇಲಾಖಾ ಜಾಗಕ್ಕೆ ಪ್ರವೇಶ ದ್ವಾರವೊಂದಿದ್ದು, ಈ ಹಿಂದೆ ಇಲ್ಲಿ ಕಾವಲುಗಾರ ಇರುತ್ತಿದ್ದ. ಅಲ್ಲದೆ ಒಳ ಮತ್ತು ಹೊರ ಹೋಗಲು ಸಮಯ ನಿಗದಿಪಡಿಸಲಾಗಿತ್ತು. ಇದೀಗ ಯಾವುದೂ ಇಲ್ಲ. ಈ ಹಿಂದೆ ಇದ್ದ ಗೇಟಿನ ಪಕ್ಕದಲ್ಲೇ ಇನ್ನೊಂದು ಸುಂದರವಾದ ಗೇಟು ನಿರ್ಮಾಣವಾಗಿದೆ. ಈ ಗೇಟು ಈಗ ಸದಾ ತೆರದಿರುತ್ತೆ. ಇಲ್ಲಿ ಯಾರೂ ಕೇಳುವರಿಲ್ಲದಂತಾಗಿದೆ. ರಜಾ ದಿನ ಬಂದರೆ ಸಾಕು ಇಲ್ಲಿಗೆ ದೂರದೂರಿನ ಜನತೆ ಮೋಜು-ಮಸ್ತಿಗೆ ಆಗಮಿಸುತ್ತಾರೆ.
ಇನ್ನು ಇಲ್ಲಿನ ಸ್ಥಳೀಯರು ಈ ಕುರಿತು ಮಾತನಾಡಿದ್ದು, "ಪ್ರವಾಸಿಗರು ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುತ್ತಾರೆ. ತಿಂಡಿ ಪೊಟ್ಟಣಗಳನ್ನು ಅಲ್ಲಲ್ಲಿ ಬಿಸಾಡುತ್ತಾರೆ. ಕುಡಿದ ಮದ್ಯದ ಬಾಟಲಿಗಳನ್ನು ಹುಡಿ ಮಾಡಿ ಮೋಜು-ಮಸ್ತಿಯಲ್ಲಿ ತೊಡಗಿರುತ್ತಾರೆ. ಫಾರಂನ ಬಳಕೆಯಲ್ಲಿರುವ ನೀರಿನ ಟ್ಯಾಂಕ್ಗಳಿಗೆ ಕಸಕಡ್ಡಿಗಳನ್ನು ಹಾಕುತ್ತಾರೆ. ಪ್ರಶ್ನಿಸಲು ಹೋದ ಸಿಬ್ಬಂದಿಯನ್ನು ದಬಾಯಿಸುತ್ತಾರೆ. ಇಂತಹ ಸನ್ನಿವೇಶದಲ್ಲಿ ಈ ಭಾಗದಲ್ಲಿ ನಡೆದಾಡುವ ಮಹಿಳೆಯರು, ಮಕ್ಕಳು, ಸಭ್ಯ ಜನರಿಗೆ ಅಸಹ್ಯವೆನಿಸುತ್ತದೆ" ಎಂದು ಆರೋಪಿಸಿದ್ದಾರೆ.