ಬೆಳ್ತಂಗಡಿ :ಮಗಳನ್ನು ಮದುವೆ ಮಾಡಿ ಕೊಡಲು ನಿರಾಕರಿಸಿದ್ದಕ್ಕೆ ವ್ಯಕ್ತಿಯೊಬ್ಬರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಕೊಲೆ ಮಾಡಲು ಯತ್ನಿಸಿದ ಘಟನೆ ತಾಲೂಕಿನ ಲಾಯಿಲ ಗ್ರಾಮದ ವಿವೇಕಾನಂದ ನಗರದಲ್ಲಿ ನಡೆದಿದೆ. ಈ ವೇಳೆ ಗಲಾಟೆ ತಡೆಯಲು ಹೋದ ಗ್ರಾಮ ಪಂಚಾಯತ್ ಸದಸ್ಯರೊಬ್ಬರಿಗೂ ಗಾಯವಾಗಿದೆ.
ಏನಿದು ಘಟನೆ?
ಕಡಬ ತಾಲೂಕು ಸುಬ್ರಹ್ಮಣ್ಯ ಸಮೀಪದ ನಿವಾಸಿ ದಿನೇಶ್ ಎಂಬಾತ ಕೊಲೆಗೆ ಯತ್ನಿಸಿದ ಆರೋಪಿ. ಈತ ಲಾಯಿಲದ ವಿವೇಕಾನಂದ ನಗರದ ವ್ಯಕ್ತಿಯೋರ್ವರ ಮಗಳನ್ನು ಮದುವೆ ಮಾಡಿ ಕೊಡುವಂತೆ ಕೇಳುತ್ತಿದ್ದನಂತೆ. ಆದರೆ, ಇದಕ್ಕೆ ಅವರು ನಿರಾಕರಿಸಿದ್ದರು.
ಇದೇ ಕೋಪದಲ್ಲಿ ಜುಲೈ 11ರಂದು ಬೆಳಗ್ಗೆ 10:30ರ ಸುಮಾರಿಗೆ ಆ ವ್ಯಕ್ತಿಯ ಮನೆ ಬಳಿಗೆ ಬೈಕ್ನಲ್ಲಿ ಆಗಮಿಸಿದ ದಿನೇಶ್, ಅವಾಚ್ಯ ಶಬ್ಧಗಳಿಂದ ನಿಂದಿಸಿ, ನಿಮ್ಮ ಮಗಳನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ. ಅಲ್ಲದೆ ಮೊದಲೇ ಬ್ಯಾಗ್ನಲ್ಲಿ ತಂದಿದ್ದ ಕತ್ತಿಯಿಂದ ತಲೆ ಕಡಿಯಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.