ಮಂಗಳೂರು (ದಕ್ಷಿಣ ಕನ್ನಡ) :ಕೊರಗಜ್ಜ ದೈವದ ಮೇಲೆ ಕರಾವಳಿ ಜನರಿಗೆ ಅಪಾರ ನಂಬಿಕೆ. ಹಿಂದೂಗಳು ಆರಾಧಿಸುವ ಕೊರಗಜ್ಜ ದೈವವನ್ನು ಮಂಗಳೂರಿನ ಮುಸ್ಲಿಂ ಭಕ್ತರೊಬ್ಬರು ಗುಡಿಕಟ್ಟಿ ಆರಾಧಿಸುವ ಮೂಲಕ ಧರ್ಮ ಸಾಮರಸ್ಯಕ್ಕೊಂದು ಬೆಸುಗೆ ಹಾಕಿದ್ದಾರೆ.
ಕೇರಳದ ಪಾಲಕ್ಕಾಡ್ ಜಿಲ್ಲೆಯ ಮುಸ್ಲಿಂ ಕುಟುಂಬದಿಂದ ಬಂದ ಖಾಸಿಮ್ ಸಾಹೇಬ್ ಎಂಬುವರು ಇಂತಹ ಅಪರೂಪದ ನಡೆಗೆ ಸಾಕ್ಷಿಯಾಗಿದ್ದಾರೆ. 35 ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಗೆ ಬಂದಿದ್ದ ಖಾಸಿಮ್ ಸಾಹೇಬ್, ಮಂಗಳೂರಿನ ಮುಲ್ಕಿ ಬಳಿಯ ಕವತ್ತಾರು ಗ್ರಾಮದ ಅತಿಕಾರಿಬೆಟ್ಟು ಎಂಬಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದರು.
ಕಟ್ಟಿಗೆ ಕಡಿದು ಜೀವನ ಸಾಗಿಸುತ್ತಿದ್ದ ಇವರಿಗೆ 19 ವರ್ಷಗಳ ಹಿಂದೆ ಒಂದಿಲ್ಲ ಒಂದು ಸಮಸ್ಯೆಗಳು ಶುರುವಾಯ್ತಂತೆ. ಮಕ್ಕಳ ಮದುವೆಯಾಗದ ಚಿಂತೆಯ ಜೊತೆಗೆ ಅವರ ಕಾಲಿಗೂ ಗಾಯವಾಗಿತ್ತಂತೆ. ಈ ಬಗ್ಗೆ ಹಲವೆಡೆ ವಿಚಾರಿಸಿದ ಖಾಸಿಂಗೆ ಕೊರಗಜ್ಜ ದೈವವನ್ನು ಆರಾಧಿಸಬೇಕು ಅಥವಾ ಆ ಜಾಗ ಬಿಟ್ಟು ಹೋಗಬೇಕು ಎಂದು ದೈವ ನುಡಿದಿತ್ತಂತೆ.
ಹಿಂದೂ ದೈವ ಕೊರಗಜ್ಜನ ಗುಡಿ ಕಟ್ಟಿ ಪೂಜಿಸುವ ಮುಸ್ಲಿಂ ಇದಾದ ಬಳಿಕ ಖಾಸಿಂ ಕೊರಗಜ್ಜೆ ದೈವವನ್ನು ಆರಾಧಿಸಲು ಮುಂದಾಗಿದ್ದು, ಎಲ್ಲ ಸಮಸ್ಯೆಗಳೂ ಪರಿಹಾರವಾದವಂತೆ. ತಮ್ಮ ಮನೆಯ ಪಕ್ಕದಲ್ಲಿಯೇ ಕೊರಗಜ್ಜನ ಗುಡಿ ನಿರ್ಮಿಸಿ ಪ್ರತಿದಿನ ಅದರ ಪೂಜೆಯಲ್ಲಿ ತೊಡಗಿದ್ದಾರೆ.
ಈ ದೈವಸ್ಥಾನದಲ್ಲಿ ಕೊರಗಜ್ಜ ದೈವದ ಜೊತೆಗೆ ಕೊರತಿ ದೈವ, ಗುಳಿಗ ದೈವ ಮತ್ತು ದುರ್ಗಿಯನ್ನು ಪೂಜಿಸುತ್ತಿದ್ದಾರೆ. ಕೊರಗಜ್ಜ ದೈವಕ್ಕೆ ಪ್ರತಿದಿನ ಎರಡು ಬಾರಿ ಪೂಜೆ ಸಲ್ಲಿಸುವ ಇವರು ಇಡೀ ದಿನ ಗುಡಿಯ ಬಳಿಯೇ ಕಾಲ ಕಳೆಯುತ್ತಾರೆ. ದೈವದ ಪೂಜೆ ಮಾಡಿ ಭಕ್ತರಿಗೆ ಪ್ರಸಾದ ನೀಡುವುದು, ದೈವದ ಮುಂದೆ ಪ್ರಶ್ನೆಗಳನಿಟ್ಟು ಪರಿಹಾರ ಸೂಚಿಸುವ ಕಾರ್ಯಕ್ಕೆ ಇವರೀಗ ಹೆಸರುವಾಸಿಯಾಗಿದ್ದಾರೆ.
ದೈವದ ಆರಾಧನೆಯಲ್ಲಿ ತೊಡಗಿರುವುದರಿಂದ ಖಾಸಿಂ ಅವರು ಶುದ್ಧಸಸ್ಯಹಾರಿಗಳಾಗಿದ್ದಾರೆ. ಖಾಸಿಂ ಅವರ ಕುಟುಂಬವೇ ಕೊರಗಜ್ಜನ ಆರಾಧನೆ ಮಾಡುತ್ತದೆ. ಈ ಕ್ಷೇತ್ರಕ್ಕೆ ಹಿಂದೂ-ಮುಸ್ಲಿಂ ಎಂಬ ಬೇಧವಿಲ್ಲದೆ ಪ್ರಾರ್ಥನೆಗೆ ಬರುತ್ತಾರೆ ಎಂದು ಖಾಸಿಂ ಸಂತಸದಿಂದ ನುಡಿಯುತ್ತಾರೆ.