ಮಂಗಳೂರು: ಸರ್ಕಾರ ರಾಜ್ಯದಲ್ಲಿರುವ ವಲಸೆ ಕಾರ್ಮಿಕರಿಗೆ ತಮ್ಮ ಜಿಲ್ಲೆಗಳಿಗೆ ತೆರಳಲು ದುಪ್ಪಟ್ಟು ಬಸ್ ಚಾರ್ಜ್ ವಿಧಿಸಿ, ಹೊರ ದೇಶಗಳಿಂದ ಬರುವ ಅನಿವಾಸಿ ಭಾರತೀಯರಿಗೆ ಉಚಿತವಾಗಿ ಭಾರತಕ್ಕೆ ಆಗಮಿಸಲು ವ್ಯವಸ್ಥೆ ಮಾಡಿದೆ. ಪಾಸ್ಪೋರ್ಟ್ಗಳು ಮಾಡಿದ ತಪ್ಪಿಗೆ ರೇಷನ್ ಕಾರ್ಡ್ಗಳಿಗೆ ಶಿಕ್ಷೆ ನೀಡೋದು ಎಷ್ಟು ಸರಿ ಎಂದು ಶಾಸಕ ಯು ಟಿ ಖಾದರ್ ಟ್ವೀಟ್ ಮಾಡುವ ಮೂಲಕ ಸರ್ಕಾರವನ್ನು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ಪಾಸ್ ಪೋರ್ಟ್ಗಳ ತಪ್ಪಿಗೆ ರೇಷನ್ ಕಾರ್ಡ್ಗಳಿಗೆ ಶಿಕ್ಷೆ ಎಷ್ಟು ಸರಿ? ಟ್ವೀಟ್ ಮೂಲಕ ಖಾದರ್ ಪ್ರಶ್ನೆ!! - ಅನಿವಾಸಿ ಭಾರತೀಯರಿಗೆ ಉಚಿತವಾಗಿ ಭಾರತಕ್ಕೆ ಆಗಮಿಸಲು ವ್ಯವಸ್ಥೆ
ಸರ್ಕಾರ ವಲಸೆ ಕಾರ್ಮಿಕರಿಂದ ಬಿಡಿಗಾಸು ಪಡೆಯದೆ ಅವರ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಿ ಅನ್ನೋದೇ ನನ್ನ ಹಕ್ಕೊತ್ತಾಯ ಎಂದು ಶಾಸಕ ಯು.ಟಿ.ಖಾದರ್ ಟ್ವೀಟ್ ಮಾಡಿದ್ದಾರೆ.
ರಾಜ್ಯದ ವಿವಿಧ ಭಾಗಗಳಲ್ಲಿ ಕೂಲಿ ಕೆಲಸಗಳಿಗೆಂದು ಬಂದು ತಮ್ಮ ತಮ್ಮ ಊರಿಗೆ ತೆರಳಬೇಕೆಂದು ಮನವಿ ಮಾಡಿರುವ ವಿವಿಧ ಜಿಲ್ಲೆಗಳ ವಲಸೆ ಕಾರ್ಮಿಕರಿಗೆ ದುಪ್ಪಟ್ಟು ದರದಲ್ಲಿ ಬಸ್ ಚಾರ್ಜ್ ವಸೂಲಿ ಮಾಡಿರುವ ಸರ್ಕಾರ, ಅಮೆರಿಕಾ, ದುಬೈ, ಯುರೋಪ್ನಲ್ಲಿರೋ ಭಾರತೀಯರಿಗೆ ವಿಮಾನ, ಹಡಗುಯಾನಗಳ ಪ್ರಯಾಣ ದರ ನೀಡಿ ಕರೆದುಕೊಂಡು ಬಂದಿದೆ. ಇದು ತಪ್ಪು ಎಂದು ನಾನು ಹೇಳೋದಿಲ್ಲ. ಆದರೆ, ಎರಡು ತಿಂಗಳಿನಿಂದ ಕೆಲಸವಿಲ್ಲದೆ, ಕೈಯಲ್ಲಿ ಬಿಡಿಗಾಸೂ ಇಲ್ಲದೆ ಬೀದಿ ಪಾಲಾಗಿರೋ ಅಸಂಖ್ಯ ವಲಸೆ ಕಾರ್ಮಿಕರಿಂದ ಬಸ್ ಚಾರ್ಜ್ ವಸೂಲಿ ಮಾಡಿರೋದು ಅಮಾನವೀಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಆದ್ದರಿಂದ ಸರ್ಕಾರ ವಲಸೆ ಕಾರ್ಮಿಕರಿಂದ ಬಿಡಿಗಾಸು ಪಡೆಯದೆ ಅವರ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಿ ಅನ್ನೋದೇ ನನ್ನ ಹಕ್ಕೊತ್ತಾಯ ಎಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.