ಸುಳ್ಯ :ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ 4ನೇ ವಾರ್ಡ್ ಬೆಟ್ಟಂಪಾಡಿಯಲ್ಲಿ ಕೊಳವೆ ಬಾವಿಯಿಂದ ಪೂರೈಕೆಯಾಗುತ್ತಿರುವ ಕುಡಿಯುವ ನೀರು ಸೀಮೆಎಣ್ಣೆ ವಾಸನೆಯಿಂದ ಕೂಡಿದೆ. ಹೀಗಾಗಿ, ಜನರಿಗೆ ಉಪಯೋಗಿಸಲು ಸಾಧ್ಯವಾಗುತ್ತಿಲ್ಲ.
ಕಳೆದ ಸುಮಾರು ಒಂದೂವರೆ ತಿಂಗಳಿನಿಂದಲೂ ಜನರಿಗೆ ಈ ರೀತಿಯ ಅನುಭವವಾಗುತ್ತಿದೆ. ಹೀಗಾಗಿ, ಕೊಳವೆ ಬಾವಿಯಿಂದ ನೀರನ್ನು ಪಂಪ್ ಮೂಲಕ ಟ್ಯಾಂಕ್‌ಗೆ ಹಾಕಿ ಅಲ್ಲಿಂದ ಮನೆಗಳಿಗೆ ಸರಬರಾಜು ಮಾಡಲಾಗುತ್ತಿದೆ.
ಅಲ್ಲದೆ, ಕೊಳವೆಬಾವಿಯಿಂದ ನೇರವಾಗಿಯೂ ಕೆಲ ಮನೆಗಳಿಗೆ ಸರಬರಾಜು ಮಾಡಲಾಗುತ್ತಿದೆ. ಸುಳ್ಯ ತಾಲೂಕಿನ ಬೆಟ್ಟಂಪಾಡಿಯ 130 ಮನೆ ಮತ್ತು ಶಾಂತಿನಗರದ ಕೆಲ ಮನೆಗಳು ಸೇರಿ ಒಟ್ಟು ಸುಮಾರು 150ಕ್ಕೂ ಹೆಚ್ಚು ಮನೆಗಳಿಗೆ ಈ ನೀರು ಪೂರೈಸಲಾಗುತ್ತಿದೆ.
ನೀರನ್ನು ಬಿಸಿ ಮಾಡಿದರೂ ಸೀಮೆ ಎಣ್ಣೆ ವಾಸನೆ ಮಾತ್ರ ಹೋಗುತ್ತಿಲ್ಲ. ಈ ನೀರಿನಲ್ಲಿ ಬೇಯಿಸಿದ ಆಹಾರಗಳೂ ಸೀಮೆಎಣ್ಣೆ ವಾಸನೆ ಬೀರುತ್ತಿವೆ. ಮುಖ ತೊಳೆಯಲು, ಸ್ನಾನ ಮಾಡಲೂ ಆಗದ ಪರಿಸ್ಥಿತಿ ನಿರ್ಮಾಣ ಆಗಿದೆ ಎನ್ನುತ್ತಾರೆ ಸ್ಥಳೀಯರು.
ನೀರಿನ ಟ್ಯಾಂಕ್‌ಗೆ ಸೀಮೆಎಣ್ಣೆ ಬಿದ್ದಿರುವ ಸಾಧ್ಯತೆಯ ಅನುಮಾನದ ಮೇರೆಗೆ ನೇರವಾಗಿ ಕೊಳವೆಬಾವಿಯಿಂದ ನೀರಿನ ಸಂಪರ್ಕ ಕಲ್ಪಿಸಲಾಗಿತ್ತು. ಆಗ ವಾಸನೆ ಇನ್ನೂ ಜಾಸ್ತಿಯಾಗಿದೆ. ಪೆಟ್ರೋಲ್ ಪಂಪ್ಗಳು ಸುಮಾರು ಒಂದು ಕಿ.ಮೀ ದೂರದಲ್ಲಿವೆ. ಈಗಾಗಲೇ ವಾಸನೆ ಬೀರುವ ನೀರಿನ ಮಾದರಿಯನ್ನು ಸಂಗ್ರಹಿಸಿ ಮಂಗಳೂರಿನ ಪರೀಕ್ಷಾಲಯಕ್ಕೆ ಕಳುಹಿಸಲಾಗಿದೆ ಎಂದು ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ತಿಳಿಸಿದ್ದಾರೆ.
ವರದಿ ಬಂದ ಬಳಿಕ ನೀರಿನಲ್ಲಿ ಪೆಟ್ರೋಲ್, ಡೀಸೆಲ್ ಅಥವಾ ಸೀಮೆಎಣ್ಣೆ ಮಿಶ್ರಿತವಾಗಿದೆಯಾ? ಎಂದು ತಿಳಿದು ಬರಲಿದೆ. ನಂತರದಲ್ಲಿ ಯಾವ ಕಾರಣದಿಂದಾಗಿ ಕೊಳವೆಬಾವಿಯ ನೀರಿನಲ್ಲಿ ಸೀಮೆಎಣ್ಣೆ ವಾಸನೆ ಬರುತ್ತಿದೆ? ಎಂದು ಪತ್ತೆ ಹಚ್ಚಲಾಗುತ್ತಿದೆ. ಕೂಡಲೇ ನೀರು ಉಪಯೋಗಿಸುತ್ತಿದ್ದವರಿಗೆ ಬದಲಿ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದಿದ್ದಾರೆ.
ಓದಿ:ಕಾಂಗ್ರೆಸ್ನವರು ಹೇಳಿಕೊಳ್ಳಲು ಭಾರತೀಯರು.. ಆದರೆ, ಇಟಲಿ ನಾಯಕತ್ವಕ್ಕೆ ಮಣೆ ಹಾಕ್ತಿದ್ದಾರೆ.. ಸಿ ಟಿ ರವಿ