ಮಂಗಳೂರು: ನಾಳೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುವ ಕೇರಳ ರಾಜ್ಯದವರಿಗೆ ಜಿಲ್ಲೆಯ ಗಡಿಭಾಗದಲ್ಲಿರುವ ಗ್ರಾಮಗಳ ಮಟ್ಟದಲ್ಲಿಯೇ ಕೊರೊನಾ ಪರೀಕ್ಷೆ ನಡೆಸಿ ಒಳಬರಲು ಅನುಮತಿ ನೀಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಈಗ ಜಿಲ್ಲೆಯ 4 ಭಾಗಗಳಲ್ಲಿ ಆರ್ಟಿಪಿಸಿಆರ್ ತಪಾಸಣೆ ನಡೆಸಿ ಒಳಬರಲು ಅವಕಾಶವನ್ನು ನೀಡಲಾಗುತ್ತಿದೆ. ನಾಳೆಯಿಂದ ಜಿಲ್ಲೆಯ ಕೇರಳದ ಎಲ್ಲಾ ಗಡಿಭಾಗದಲ್ಲಿ ಗ್ರಾಮಮಟ್ಟದಲ್ಲಿ ತಪಾಸಣೆ ನಡೆಸಿ ಕರ್ನಾಟಕ ಪ್ರವೇಶಕ್ಕೆ ವ್ಯವಸ್ಥೆ ಮಾಡಲಾಗುವುದು. ಈಗಾಗಲೇ ಇದಕ್ಕೆ ಸಿದ್ಧತೆಗಳನ್ನು ನಡೆಸಲಾಗಿದೆ ಎಂದರು.
ಕೇರಳದಿಂದ ಬರುವವರು ಜಿಲ್ಲೆಯ ಗ್ರಾಮಮಟ್ಟದಲ್ಲಿ ಆರ್ಟಿಪಿಸಿಆರ್ ವರದಿಗಳನ್ನು ತೋರಿಸಿ ಕರ್ನಾಟಕ ಪ್ರವೇಶಿಸಬಹುದು. ಕೇರಳದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಗಡಿಭಾಗದಲ್ಲಿರುವವರು ಜಾಗ್ರತೆಯಲ್ಲಿರಬೇಕು. ಸದ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪತ್ತೆಯಾಗುತ್ತಿರುವ ಕೊರೊನಾ ಪ್ರಕರಣಗಳು ಹೆಚ್ಚಿನವು ಕೇರಳದಿಂದ ಬಂದವರದ್ದಾಗಿದೆ ಎಂದರು.