ಮಂಗಳೂರು:ದಕ್ಷಿನಕನ್ನಡ ಜಿಲ್ಲೆಯ ಬೆಳ್ತಂಗಡಿ ಅರಣ್ಯ ಸಂಚಾರಿ ದಳದಲ್ಲಿ ಸೇವೆಯಲ್ಲಿದ್ದ ಅರಣ್ಯಾಧಿಕಾರಿ ಸಂಧ್ಯಾ ಸಚಿನ್ ಅವರ ಬೀದರ್ ವರ್ಗಾವಣೆ ಆದೇಶಕ್ಕೆ ಕೆಎಟಿ ತಡೆಯಾಜ್ಞೆ ನೀಡಿದೆ. ಈ ಮೂಲಕ ಅಧಿಕಾರಿಯನ್ನು ವರ್ಗಾಯಿಸುವಂತೆ ಸಿಎಂಗೆ ಪತ್ರ ಬರೆದಿದ್ದ ಶಾಸಕ ಹರೀಶ್ ಪೂಂಜಾ ಅವರಿಗೆ ತೀವ್ರ ಮುಖಭಂಗವಾಗಿದೆ.
ಸರ್ಕಾರದ ಆದೇಶದ ವಿರುದ್ಧ ಅರಣ್ಯಾಧಿಕಾರಿ ಸಂಧ್ಯಾ ಸಚಿನ್ ಕೆಎಟಿ (ಕರ್ನಾಟಕ ಆಡಳಿತಾತ್ಮಕ ನ್ಯಾಯಾಧೀಕರಣ ಪೀಠ)ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಇದು ರಾಜಕೀಯ ಕಾರಣಕ್ಕೆ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆ ಮಾಡುವಾಗ ಯಾವುದೇ ನಿಯಮಗಳನ್ನು ಪಾಲಿಸಿಲ್ಲ ಎಂದು ಹೇಳಿದೆ. ಈ ಮೂಲಕ ಸಂಧ್ಯಾ ಅವರನ್ನು ಮೊದಲಿದ್ದ ಹುದ್ದೆಯಲ್ಲೇ ಮರು ನೇಮಕಗೊಳಿಸಿ ಕೆಎಟಿ ಆದೇಶ ಹೊರಡಿಸಿದೆ.
ಇತ್ತೀಚೆಗೆ ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದಲ್ಲಿ ಯಾವುದೇ ಅನುಮತಿ ಇಲ್ಲದೆ ಕೋಟ್ಯಂತರ ರೂ. ಮೌಲ್ಯದ ಮರಗಳನ್ನು ಬಿಜೆಪಿ ನಾಯಕ ಎನ್ನಲಾದ ಪಂಚಮುಖಿ ಬಾಲಕೃಷ್ಣ ಶೆಟ್ಟಿ ಎಂಬುವವರು ಕಡೆಸಿದ್ದರು ಎನ್ನಲಾಗ್ತಿದೆ. ಸ್ಥಳೀಯರ ದೂರಿನ ಬೆನ್ನಲ್ಲೇ ಸ್ಥಳಕ್ಕೆ ತೆರಳಿದ್ದ ಅರಣ್ಯಾಧಿಕಾರಿ ಸಂಧ್ಯಾ ಬೆಲೆ ಬಾಳುವ ಮರಗಳ ಜೊತೆಗೆ ಬಾಲಕೃಷ್ಣ ಶೆಟ್ಟಿಗೆ ಸೇರಿದ ಲಾರಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದರು.
ಇದೇ ಕಾರಣದಿಂದ ಸಂಧ್ಯಾ ಸಚಿನ್‌ರನ್ನು ಬೀದರ್‌ಗೆ ವರ್ಗಾಯಿಸುವಂತೆ ಶಾಸಕ ಹರೀಶ್ ಪೂಂಜಾ ಸಿಎಂಗೆ ಪತ್ರ ಬರೆದಿದ್ದರು ಎನ್ನಲಾಗಿತ್ತು. ಅವರ ಸಹಿ ಇರುವ ಸಿಎಂಗೆ ಬರೆದಿರುವ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಅಲ್ಲದೆ ಅರಣ್ಯಾಧಿಕಾರಿ ಸಂಧ್ಯಾ ಸಚಿನ್ ಅವರು ತಾನು ಮರಗಳ್ಳರ ಮೇಲೆ ಕ್ರಮ ಕೈಗೊಂಡಿರುವ ಸೇಡಿಗಾಗಿ ತನ್ನನ್ನು ವರ್ಗಾವಣೆ ಮಾಡಲಾಗಿದೆ ಎಂದು ಸಂಧ್ಯಾ ಸಚಿನ್ ಬರೆದಿದ್ದ ಪತ್ರವೂ ವೈರಲ್ ಆಗಿತ್ತು.
ಇದನ್ನೂ ಓದಿ: ರಾಜ್ಯದಲ್ಲಿಂದು 229 ಮಂದಿಗೆ ಕೋವಿಡ್ : ಮೂವರು ಸೋಂಕಿತರು ಸಾವು