ಬೆಂಗಳೂರು, ಬೆಳ್ತಂಗಡಿಯಲ್ಲಿ ಧಾರಾಕಾರ ಮಳೆ ಬೆಳ್ತಂಗಡಿ/ಬೆಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಇಂದು ಗುಡುಗುಸಹಿತ ಭಾರಿ ಮಳೆ ಸುರಿಯಿತು. ಮುಂಡಾಜೆ, ಕಡಿರುದ್ಯಾವರ, ಕಕ್ಕಿಂಜೆ, ಚಾರ್ಮಾಡಿ ಭಾಗದಲ್ಲಿ ಮಳೆಯಾಗಿದ್ದು, ರಸ್ತೆಗಳು ನೀರು ತುಂಬಿ ಕೆರೆಯಂತಾಗಿದ್ದವು. ರಾಷ್ಟ್ರೀಯ ಹೆದ್ದಾರಿ ಪುಂಜಾಲಕಟ್ಟೆ- ಚಾರ್ಮಾಡಿತನಕ ಕಾಮಗಾರಿ ನಡೆಯುತ್ತಿದ್ದು, ಮಳೆ ನೀರು ಮುಂಡಾಜೆಯ ಸೋಮಂತಡ್ಕದ ಪೇಟೆಯ ಕೆಲವು ಅಂಗಡಿ, ಮನೆಗಳಿಗೆ ನುಗ್ಗಿತು. ಸೋಮಂತಡ್ಕ-ದಿಡುಪೆ ರಸ್ತೆಯಲ್ಲಿ ಮರ ಉರುಳಿ ಬಿದ್ದು ವಿದ್ಯುತ್ ಕಂಬ ಧರಾಶಾಯಿಯಾಗಿ ಕೆಲಹೊತ್ತು ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಯಿತು. ಈ ಭಾಗದಲ್ಲಿ ವಿದ್ಯುತ್ ಪೂರೈಕೆಯು ಸ್ಥಗಿತಗೊಂಡಿದೆ.
ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆಯ ಅಂಬಡ್ತ್ಯಾರು ಎಂಬಲ್ಲಿ ಮರ ರಸ್ತೆಗೆ ಉರುಳಿ ಕೊಂಚ ಹೊತ್ತು ಸಂಚಾರ ವ್ಯತ್ಯಯವಾಯಿತು. ಸ್ಥಳದಲ್ಲಿದ್ದ ಕಾಮಗಾರಿಯವರ ಜೆಸಿಬಿ ಮೂಲಕ ಮರ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಕಾನೂನು ಮಾಡಿಕೊಡಲಾಯಿತು. ಮರ ಬಿದ್ದ ಕಾರಣ ಮುಂಡಾಜೆ- ಕಾಯರ್ತೋಡಿ ವಿದ್ಯುತ್ ಲೈನ್ ತಂತಿ ತುಂಡಾಗಿದ್ದು, ನೂರಾರು ಮನೆಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.ಸೋಮಂತಡ್ಕ ಪಂಚಾಯಿತಿ ಸಮೀಪ ವಾಸವಿರುವ ಬಾಲಕೃಷ್ಣ ಪೂಜಾರಿ ಎಂಬವರ ವಾಸದ ಮನೆಯ ಹದಿನೈದು ಶೀಟುಗಳು ಗಾಳಿಗೆ ಹಾರಿಹೋಗಿವೆ.
ಪಿಲತ್ತಡ್ಕ ಎಂಬಲ್ಲಿ ರಮಾನಂದ ಎಂಬವರ ಮನೆಯ ವಿದ್ಯುತ್ ಪರಿಕರಗಳಿಗೆ ಸಿಡಿಲು ಬಡಿದಿದ್ದು, ಹಾನಿ ಉಂಟಾಗಿದೆ. ಮುಂಡಾಜೆ ಗ್ರಾಮದ ಮುಂಡಾಲಬೆಟ್ಟು ಸುರೇಶ ಗೌಡ ಎಂಬವರ ಮನೆಗೆ ಸಿಡಿಲು ಬಡಿದು ಲಕ್ಷಾಂತರ ರೂ. ಮೌಲ್ಯದ ವಿದ್ಯುತ್ ಪರಿಕರಗಳಿಗೆ ಹಾನಿಯಾಗಿದ್ದು, ವಯರಿಂಗ್ ಕೂಡ ಸುಟ್ಟುಹೋಗಿದೆ. ಮನೆಯ ಗೋಡೆಯು ಬಿರುಕು ಬಿಟ್ಟಿದ್ದು ಕಂಪೌಂಡ್ ಕುಸಿದಿದೆ.
ಇದನ್ನೂ ಓದಿ :ಸಾಲು ಸಾಲು ರಜೆ, ಕಡಿಮೆಯಾದ ಮಳೆ: ಪ್ರವಾಸಿಗರ ನಡೆ ಕಾರವಾರದ ಕಡಲತೀರಗಳ ಕಡೆ
ಬೆಂಗಳೂರಿಗೆ ಇನ್ನೂ 4 ದಿನ ಮಳೆ ಮುನ್ಸೂಚನೆ:ರಾಜ್ಯ ಬೆಂಗಳೂರಿರು ನಗರದಲ್ಲೂ ಕಳೆದೆರಡು ದಿನಗಳಿಂದ ಮತ್ತೆ ಮಳೆ ಆರಂಭವಾಗಿದೆ. ಇಂದು ಸಂಜೆಯಿಂದ ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಸುರಿದಿದೆ. ಮಳೆಯಿಂದ ವಾಹನ ಸವಾರರು ಪರದಾಟ ನಡೆಸುವಂತಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತು. ಶಿವಾಜಿನಗರ, ವಸಂತನಗರ, ಶಾಂತಿನಗರ, ಜಯನಗರ, ವಿಜಯನಗರ, ಮಲ್ಲೇಶ್ವರ, ಯಶವಂತಪುರ, ರಾಜಾಜಿನಗರ, ಎಂ.ಜಿ.ರಸ್ತೆ, ಕಬ್ಬನ್ ಪಾರ್ಕ್ ಸೇರಿದಂತೆ ನಗರದ ಬಹುತೇಕ ಕಡೆ ಉತ್ತಮ ಮಳೆ ಆಗಿದೆ. ಇನ್ನೂ ನಾಲ್ಕು ದಿನಗಳ ಕಾಲ ಬೆಂಗಳೂರಿನಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕಳೆದ ವಾರ ಉಷ್ಣಾಂಶ ಹೆಚ್ಚಳವಾಗಿ ರಾಜಧಾನಿಯಲ್ಲಿ ಸೆಖೆಯ ವಾತಾವರಣವಿತ್ತು. ಆದರೆ ನಿನ್ನೆ ಸಂಜೆ ಕೂಡ ಮಳೆಯಾಗಿ ವಾತಾವರಣ ತಂಪಾಗಿತ್ತು. ಸೋಮವಾರ ಮುಂಜಾನೆಯಿಂದ ಮಳೆ ಸುರಿಯಿತು. ನಂತರ ಇಡೀ ದಿನ ಮೋಡದ ವಾತಾವರಣವಿದ್ದರೂ ಬಿಸಿಲು ಕೂಡ ಬಿದ್ದಿತ್ತು. ಸಂಜೆ 4 ಗಂಟೆಯ ನಂತರ ನಗರದ ಕೆಲವೆಡೆ ಆರಂಭವಾದ ನಂತರ ಎಲ್ಲೆಡೆ ಸುರಿಯಿತು.
ದಕ್ಷಿಣ ಒಳನಾಡಿನಲ್ಲಿ ನೈಋತ್ಯ ಮುಂಗಾರು ಚುರುಕುಗೊಂಡಿದ್ದು ಮುಂದಿನ ಎರಡು ದಿನಗಳ ಕಾಲ ಮಳೆ ಮುಂದುವರಿಯಲಿದೆ ತಿಳಿಸಿದೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಮುಂಗಾರು ದುರ್ಬಲವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಖ್ಯವಾಗಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ, ಚಾಮರಾಜನಗರ, ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಭಾರಿ ಮಳೆ ಸುರಿಯಲಿದೆ ಎಂದಿದೆ.
ಕಲಬುರಗಿಯಲ್ಲಿ ಗರಿಷ್ಟ ಉಷ್ಣಾಂಶ: ಸೋಮವಾರ ರಾಜ್ಯದಲ್ಲಿ ಗರಿಷ್ಟ ಉಷ್ಣಾಂಶ ಕಲಬುರಗಿಯಲ್ಲಿ 36.2 ಡಿಗ್ರಿ ಮತ್ತು ಕನಿಷ್ಠ ಉಷ್ಣಾಂಶ ಬಾಗಲಕೋಟೆಯಲ್ಲಿ 15 ಡಿಗ್ರಿ ದಾಖಲಾಗಿದೆ.
ಇದನ್ನೂ ಓದಿ :ಚಾರ್ಮಾಡಿ ಘಾಟಿಯಲ್ಲಿ ಧಾರಾಕಾರ ಮಳೆ, ರಸ್ತೆಗುರುಳಿದ ಮರಗಳು; ಗಂಟೆಗಟ್ಟಲೆ ಟ್ರಾಫಿಕ್ ಜಾಮ್