ಮಂಗಳೂರು/ಶಿವಮೊಗ್ಗ: ಅರಬ್ಬಿ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಕ್ಯಾರ್ ಚಂಡಮಾರುತ ಉದ್ಭವಿಸಿದ್ದು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವೆಡೆ ಗಾಳಿ ಸಹಿತ ಭಾರೀ ಮಳೆ ಮುಂದುವರೆದಿದೆ.
ಹವಾಮಾನ ಇಲಾಖೆ ಪ್ರಕಾರ ಕ್ಯಾರ್ ಚಂಡಮಾರುತ ನಿನ್ನೆ ರಾತ್ರಿ 11.30ಕ್ಕೆ ಕೇಂದ್ರಿಕೃತವಾಗಿದ್ದು, ಮಹಾರಾಷ್ಟ್ರ, ಗೋವಾ, ಕರ್ನಾಟಕ ಸೇರಿದಂತೆ ರತ್ನಗಿರಿಯಿಂದ ಪಶ್ಚಿಮಕ್ಕೆ ಸುಮಾರು 200 ಕಿ.ಮೀ. ಹಾಗೂ ಮುಂಬೈನ ನೈರುತ್ಯ ದಿಕ್ಕಿನಲ್ಲಿ 310 ಕಿ.ಮೀ.ವರೆಗೆ ಮುಂದುವರಿಯಲಿದೆ. 5 ದಿನಗಳ ನಂತರ ಒಮನ್ ಕರಾವಳಿ ಭಾಗ ಪ್ರವೇಶಸಿಲಿದೆ ಎಂದು ತಿಳಿಸಿದೆ.
ಕರಾವಳಿ ಭಾಗದಲ್ಲಿ ಆರ್ಭಟಿಸುತ್ತಿರುವ ವರುಣ ಕರಾವಳಿಯಲ್ಲಿ ಕಟ್ಟೆಚ್ಚರ:ಕ್ಯಾರ್ ಚಂಡಮಾರುತದಿಂದಾಗಿ ಸಮುದ್ರದಲ್ಲಿ ದೊಡ್ಡ ದೊಡ್ಡ ಅಲೆಗಳು ಅಬ್ಬರಿಸುತ್ತಿದ್ದು, ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಇಂದು ಆರೆಂಜ್ ಅಲರ್ಟ್ ಹಾಗೂ ನಾಳೆ ಭಾನುವಾರ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಕ್ಯಾರ್ ಚಂಡಮಾರುತದಿಂದ ಉಂಟಾದ ಹವಾಮಾನ ವೈಪರೀತ್ಯ ಹಿನ್ನೆಲೆ ಸಮುದ್ರದಲ್ಲಿ ಸಿಲುಕಿದ್ದ ಸುಮಾರು 100 ಬೋಟುಗಳು ಹಾಗೂ ಅವುಗಳಲ್ಲಿದ್ದ ಸಾವಿರಕ್ಕೂ ಅಧಿಕ ಮೀನುಗಾರರನ್ನು ರಕ್ಷಿಸಲಾಗಿದೆ. ಮಂಗಳೂರಿನ ನೂತನ ಬಂದರಿನಲ್ಲಿ ಮೀನುಗಾರಿಕಾ ಬೋಟುಗಳನ್ನು ಲಂಗರು ಹಾಕಲಾಗಿದ್ದು, ಸಾವಿರಕ್ಕೂ ಅಧಿಕ ಮೀನುಗಾರರಿಗೆ ಸುರಕ್ಷಿತ ಸ್ಥಳದಲ್ಲಿ ಆಶ್ರಯ ನೀಡಲಾಗಿದೆ.
ಝರಿ ನಾಡಾದ ಮಲೆನಾಡು:ಮಲೆನಾಡಿನಾದ್ಯಂತ ಮಳೆರಾಯ ತನ್ನ ಆಟ ಮುಂದುವರೆಸಿದ್ದು, ಶಿವಮೊಗ್ಗ ಜಿಲ್ಲೆಯ ಎಲ್ಲಾ ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ. ಎಲ್ಲೆಲ್ಲೂ ಝರಿಯಂತೆ ಗೋಚರಿಸತೊಡಗಿದೆ. ಅದಲ್ಲದೆ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ನಷ್ಟವಾಗಿದ್ದು, ರೈತರು ಕಂಗಾಲಾಗಿದ್ದಾರೆ.
ಸದ್ಯ ಶರಾವತಿ ಹಿನ್ನೀರಿನ ಭಾಗಗಳಲ್ಲಿ ಭಾರಿ ಪ್ರಮಾಣದ ಮಳೆ ಹಿನ್ನೆಲೆ ಲಿಂಗನಮಕ್ಕಿ ಜಲಾಶಯ ಭರ್ತಿಯಾಗಿದ್ದು, 30 ಸಾವಿರ ಕ್ಯೂಸೆಕ್ ನೀರು ಹೊರ ಬಿಡಲಾಗಿದೆ. ಇದರಿಂದಾಗಿ ಜೋಗ ಜಲಪಾತ ಉಕ್ಕಿ ಹರಿಯುತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ.