ಮಂಗಳೂರು: ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ರಾತ್ರಿ ಘೋಷಣೆಯಾಗಿದ್ದು, ಟಿಕೆಟ್ ವಂಚಿತರಾಗಿರುವ ಮಾಜಿ ಶಾಸಕ ಮೊಯ್ದಿನ್ ಬಾವ ಜೆಡಿಎಸ್ನಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಅನ್ನು ಉದ್ಯಮಿ ಇನಾಯತ್ ಆಲಿ ಅವರಿಗೆ ಘೋಷಿಸಲಾಗಿದೆ. ಇನಾಯತ್ ಆಲಿ ಅವರು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಆಪ್ತರಾಗಿದ್ದಾರೆ. ಮಂಗಳೂರು ಉತ್ತರ ಕ್ಷೇತ್ರದಲ್ಲಿ 2013 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆದ್ದು ಶಾಸಕರಾಗಿದ್ದ ಮೊಯ್ದಿನ್ ಬಾವ ಅವರು 2018 ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಶೆಟ್ಟಿ ಎದುರು ಸೋಲನ್ನು ಅನುಭವಿಸಿದ್ದರು. ಅವರು ಈ ಬಾರಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಮೊಯ್ದಿನ್ ಬಾವ ಅವರು ಜೆಡಿಎಸ್ ಮುಖಂಡ, ವಿಧಾನಪರಿಷತ್ ಸದಸ್ಯ ಬಿಎಂ ಫಾರೂಕ್ ಅವರ ಸಹೋದರರಾಗಿದ್ದಾರೆ.
‘ನನ್ನ ಟಿಕೆಟ್ ಡಿಕೆಶಿ ಮಾರಾಟ ಮಾಡಿದ್ದಾರೆ’: ಟಿಕೆಟ್ ವಂಚಿತರಾದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಮೊಯ್ದಿನ್ ಬಾವ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ನನ್ನ ಟಿಕೆಟ್ ಕೈತಪ್ಪಲು ನೇರ ಹೊಣೆಯಾಗಿದ್ದು, ಅವರು ಟಿಕೆಟ್ ಅನ್ನು ಮಾರಾಟ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನೇನು ತಪ್ಪು ಮಾಡಿದ್ದೇನೆ ಡಿಕೆಶಿಯವರೇ ಎಂದು ಪ್ರಶ್ನಿಸಿದ ಅವರು, ನನ್ನನ್ನು ವೈರಿಯಾಗಿ ಕಾಡಿ ಪಕ್ಷದ ಚಟುವಟಿಕೆಯಲ್ಲಿ ಎಲ್ಲೂ ಕಂಡು ಬಾರದ ಇನಾಯತ್ ಆಲಿ ಅವರಿಗೆ ಟಿಕೆಟ್ ಕೊಡುವ ಆಶ್ವಾಸನೆ ನೀಡಿದ್ದರು. ಆತ ಬಿಜೆಪಿ ವಿರುದ್ಧ ಹೋರಾಟ ಮಾಡಿದವರಲ್ಲ. ಮೊಯ್ದಿನ್ ಬಾವಾರ ಕಾರ್ಯಕರ್ತರನ್ನು, ಅಭಿಮಾನಿಗಳನ್ನು ವಿಭಾಗ ಮಾಡಿ ಹಣದ ಆಮಿಷವೊಡ್ಡಿದವರ ವಿರುದ್ಧದಿಂದ ಅವರನ್ನು ಹೊರಗಡೆ ತಂದು ಪ್ರಚಾರ ಮಾಡಲು ಆರಂಭಿಸಿದೆ. ಟಿಕೆಟ್ ಕೈತಪ್ಪಲು ಕರಾವಳಿ ಭಾಗದಲ್ಲಿ ಏಕಾಂಗಿ ಶಾಸಕನೆಂದು ಬೀಗುತ್ತಿರುವ ಮಾನ್ಯರೊಬ್ಬರು ಕಾರಣ ಎಂದರು.