ಮಂಗಳೂರು:ಮುಂಬರುವಲೋಕಸಭೆ ಚುನಾವಣೆಗೆರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ವಿಧಾನಪರಿಷತ್ ಚುನಾವಣೆಯನ್ನೂ ಒಟ್ಟಾಗಿ ಎದುರಿಸುವ ಸಾಧ್ಯತೆ ಇದೆ. ಆದರೆ, ಈ ಮೈತ್ರಿಯಿಂದ ನೈಋತ್ಯ ಶಿಕ್ಷಕ ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆ ಬಗ್ಗೆ ಗೊಂದಲಗಳು ಮೂಡುವ ಸಾಧ್ಯತೆ ದಟ್ಟವಾಗಿದೆ. ಮುಂದಿನ ಜೂನ್ ತಿಂಗಳಲ್ಲಿ ಈಶಾನ್ಯ ಪದವೀಧರ, ನೈರುತ್ಯ ಪದವೀಧರ, ಬೆಂಗಳೂರು ಪದವೀಧರ, ಆಗ್ನೇಯ ಶಿಕ್ಷಕ, ನೈಋತ್ಯ ಶಿಕ್ಷಕ, ಬೆಂಗಳೂರು ಶಿಕ್ಷಕ ಹಾಗೂ ದಕ್ಷಿಣ ಶಿಕ್ಷಕ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ.
ಪ್ರಸಕ್ತ ನೈಋತ್ಯ ಶಿಕ್ಷಕ ಕ್ಷೇತ್ರವನ್ನು ಜೆಡಿಎಸ್ನ ಭೋಜೇಗೌಡ ಪ್ರತಿನಿಧಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಕ್ಯಾ.ಗಣೇಶ್ ಕಾರ್ಣಿಕ್ ಸೋತಿದ್ದರು. ಮುಂದಿನ ಜೂನ್ನಲ್ಲಿ ನಡೆಯುವ ವಿಧಾನಪರಿಷತ್ ಚುನಾವಣೆಗೆ ಜೆಡಿಎಸ್ನಿಂದ ಭೋಜೇಗೌಡ ಮತ್ತು ಬಿಜೆಪಿಯಿಂದ ಕ್ಯಾ.ಗಣೇಶ್ ಕಾರ್ಣಿಕ್ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿ ನಡೆದಿದ್ದರಿಂದ ಈ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ಹಂಚಿಕೆಯಾಗುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಕ್ಷೇತ್ರದಲ್ಲಿ ಹಾಲಿ ವಿಧಾನಪರಿಷತ್ ಸದಸ್ಯರಾಗಿರುವ ಭೋಜೇಗೌಡ ಅವರು ಕುಮಾರಸ್ವಾಮಿ ಅತ್ಯಾಪ್ತ ಬಳಗದಲ್ಲಿ ಇರುವವರು. ಭೋಜೇಗೌಡ ಅವರು ಮುಂದಿನ ಬಾರಿ ನಡೆಯುವ ವಿಧಾನಪರಿಷತ್ ಚುನಾವಣೆಗೆ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇನ್ನು ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಅನುಭವಿಸಿದ ಕ್ಯಾ.ಗಣೇಶ್ ಕಾರ್ಣಿಕ್ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅತ್ಯಾಪ್ತರು. ಇವರು ಕೂಡ ವಿಧಾನಪರಿಷತ್ಗೆ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದ ಈ ಕ್ಷೇತ್ರದಲ್ಲಿ ಟಿಕೆಟ್ ಯಾರಿಗೆ ಸಿಗುವುದು ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಬಿಜೆಪಿಯ ಭದ್ರಕೋಟೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಇದ್ದರೂ ಈ ಎರಡು ಜಿಲ್ಲೆಗಳಲ್ಲಿ ಬಿಜೆಪಿ ಅತ್ಯಧಿಕ ಸ್ಥಾನ ಗಳಿಸಿತ್ತು. ಈ ಎರಡು ಜಿಲ್ಲೆಗಳಲ್ಲಿ ಜೆಡಿಎಸ್ ಸಾಧನೆ ಶೂನ್ಯ. ಪರಿಸ್ಥಿತಿ ಹೀಗಿರುವಾಗ ಈ ಸ್ಥಾನವನ್ನು ಬಿಜೆಪಿಯು ಜೆಡಿಎಸ್ಗೆ ಬಿಟ್ಟುಕೊಡುವ ಸಾಧ್ಯತೆ ತೀರಾ ಕಡಿಮೆ. ಮತ್ತೊಂದೆಡೆ, ಈ ಕ್ಷೇತ್ರದಲ್ಲಿ ಹಾಲಿ ಜೆಡಿಎಸ್ ವಿಧಾನಪರಿಷತ್ ಸದಸ್ಯ ಇರುವುದರಿಂದ ಈ ಕ್ಷೇತ್ರವನ್ನು ಜೆಡಿಎಸ್ ಪಕ್ಷ ಬಿಜೆಪಿಗೆ ಬಿಟ್ಟುಕೊಡುವ ಸಾಧ್ಯತೆಯೂ ಕಡಿಮೆ.