ಪುತ್ತೂರು: ದೇಶವನ್ನು ಗಂಭೀರವಾಗಿ ಕಾಡಿರುವ ಕೊರೊನಾವನ್ನು ತಡೆಯಲು ಬಿಜೆಪಿ ಸರ್ಕಾರವನ್ನು ಹೊರತುಪಡಿಸಿ ಇತರೆ ಯಾವುದೇ ಸರ್ಕಾರಗಳಿಂದ ಖಂಡಿತ ಸಾಧ್ಯವಿರಲಿಲ್ಲ. ಮುಂದಿನ ಒಂದು ತಿಂಗಳೊಳಗಾಗಿ ರಾಜ್ಯವು ಸಂಪೂರ್ಣ ಕೊರೊನಾ ಮುಕ್ತ ರಾಜ್ಯವಾಗಲಿದೆ ಎಂದು ರಾಜ್ಯ ಪೌರಾಡಳಿತ, ರೇಷ್ಮೆ ಹಾಗೂ ತೋಟಗಾರಿಕಾ ಸಚಿವ ಡಾ. ಕೆ.ಸಿ. ನಾರಾಯಣಗೌಡ ತಿಳಿಸಿದರು.
ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ, ನಗರಸಭೆ ಪುತ್ತೂರು ಇವುಗಳ ಸಹಯೋಗದಲ್ಲಿ ನಗರಸಭೆಯ ನೂತನ ಕಚೇರಿ ಕಟ್ಟಡದ ಶಿಲನ್ಯಾಸ, ನವೀಕೃತ ಪುರಭವನ ಹಾಗೂ ಗಾಂಧಿಕಟ್ಟೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ನೂತನ ಪುರಸಭಾ ಕಚೇರಿ ಕಟ್ಟಡದ ಶಿಲನ್ಯಾಸ ನೆರವೇರಿಸಿ ಅವರು ಮಾತನಾಡಿದರು. ಪುತ್ತೂರು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಈಗಾಗಲೇ ಸರ್ಕಾರದಿಂದ ರೂ.115 ಕೋಟಿ ರೂ. ಅನುದಾನ ಒದಗಿಸಲಾಗಿದೆ. ರೂ. 15 ಕೋಟಿ ರೂ. ಬಿಡುಗಡೆಗೆ ಸಿದ್ದವಾಗಿದೆ. ಮುಂದೆಯೂ ಶಾಸಕರ ಬೇಡಿಕೆಗೆ ಅನುಗುಣವಾಗಿ ಅನುದಾನವನ್ನು ಬಿಡುಗಡೆಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ನವೀಕೃತ ಸಮುದಾಯ ಭವನ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರದ ಅನುದಾನದಲ್ಲಿ ನಡೆಯುವ ಕಾಮಗಾರಿಗಳಿಗೆ ವೇಗ ನೀಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಹಲವಾರು ಅಭಿವೃದ್ಧಿ ಕೆಲಸ ಕಾರ್ಯಗಳನ್ನು ನಡೆಸಲಾಗುತ್ತಿದೆ ಎಂದರು.