ಮಂಗಳೂರು:ಪುತ್ತೂರು ಕ್ಷೇತ್ರದಿಂದ ಸ್ಪರ್ಧಿಸಲು ರಾಷ್ಟ್ರೀಯ ಪಕ್ಷಗಳ ಟಿಕೆಟ್‌ಗಾಗಿ ಆಕಾಂಕ್ಷಿಗಳು ದುಂಬಾಲು ಬೀಳುತ್ತಿದ್ದಾರೆ. ಕ್ಷೇತ್ರದಲ್ಲಿ ಪ್ರಸ್ತುತ ಬಿಜೆಪಿ ಶಾಸಕರಿದ್ದಾರೆ. ಕಾಂಗ್ರೆಸ್ ಪ್ರಾಬಲ್ಯವೂ ಇಲ್ಲಿದೆ. ಬಿಜೆಪಿ ಶಾಸಕ ಸಂಜೀವ ಮಠಂದೂರು ಈ ಬಾರಿ ಮತ್ತೆ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಹಾಗಂತ ಇವರಿಗೆ ಪೈಪೋಟಿ ಇಲ್ಲವೆಂದಲ್ಲ. ಪಕ್ಷದ ನಾಯಕ ಅರುಣ್ ಕುಮಾರ್ ಪುತ್ತಿಲ ಟಿಕೆಟ್ ರೇಸ್‌ನಲ್ಲಿರುವ ಪ್ರಮುಖರು. ಸದ್ಯ ಇವರಿಬ್ಬರ ನಡುವೆ ಸ್ಪರ್ಧೆ ಇದೆ. ಹಾಲಿ ಶಾಸಕರ ಬದಲಿಗೆ ಹೊಸ ಮುಖಕ್ಕೆ ಕಮಲ ಪಕ್ಷ ಮಣೆ ಹಾಕುವುದೇ ಎಂಬುದು ಈಗಿನ ಕುತೂಹಲ.
Big Picture: 2008ರಲ್ಲಿ ಸಿಟ್ಟಿಂಗ್ ಎಂಎಲ್‌ಎ ಶಕುಂತಳಾ ಶೆಟ್ಟಿ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದಾಗ ಕ್ಷೇತ್ರ ರಾಜ್ಯದ ಗಮನ ಸೆಳೆದಿತ್ತು. 2013ರಲ್ಲಿ ಇವರು ಕಾಂಗ್ರೆಸ್ನಿಂದ ಸ್ಪರ್ಧಿಸಿದಾಗ ಮತ್ತೊಮ್ಮೆ ಕ್ಷೇತ್ರ ಕುತೂಹಲ ಮೂಡಿಸಿತ್ತು. ಈ ಬಾರಿ ಎರಡೂ ರಾಷ್ಟ್ರೀಯ ಪಕ್ಷಗಳಿಂದ ಒಳಗೊಳಗೆ ಪೈಪೋಟಿ ಜೋರಾಗಿದೆ. ಹಾಗಾಗಿ, ಯಾರಿಗೆ ಟಿಕೆಟ್ ಸಿಗಲಿದೆ ಅನ್ನೋದನ್ನು ಕಾದುನೋಡಬೇಕು.
ಬಿಜೆಪಿಯಲ್ಲಿ ಹಾಲಿ ಶಾಸಕರು ಟಿಕೆಟ್ ರೇಸ್ನಲ್ಲಿ ಮುಂಚೂಣಿಯಲ್ಲಿದ್ದರೂ ಪುತ್ತಿಲರಿಗೆ ಟಿಕೆಟ್ ಕೊಡಬೇಕೆಂಬ ಅಭಿಯಾನ ಕೂಡ ನಡೆಯುತ್ತಿದೆ. 'ಪುತ್ತೂರಿಗೆ ಪುತ್ತಿಲ' ಎಂಬ ಹೆಸರಿನ ಅಭಿಯಾನ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ್ದು, ವರಿಷ್ಠರಿಗೆ ಟ್ಯಾಗ್ ಮಾಡುವ ಮೂಲಕ ಗಮನಸೆಳೆಯುವ ಪ್ರಯತ್ನವೂ ಆಗಿದೆ.
ಫೆ.11ರಂದು ಅಮಿತ್ ಶಾ ಪುತ್ತೂರಿಗೆ ಬಂದಾಗ ಪುತ್ತಿಲ ಬಣದ ಪ್ರಚಾರದಬ್ಬರ ಜೋರಾಗಿತ್ತು. ಹಿಂದೂ ಸಂಘಟನೆಯ ಕಾರ್ಯಕರ್ತರನ್ನು 'ಅಣಬೆಗಳು' ಎಂಬ ಶಾಸಕರ ಹೇಳಿಕೆಯೊಂದನ್ನು ಮುಂದಿಟ್ಟು ಪೇಟೆ ಮಧ್ಯದಲ್ಲೇ ವಿಚಾರಣೆ ನಡೆಸುವಷ್ಟರ ಮಟ್ಟಿಗೂ ಮುಂದುವರಿದಿತ್ತು. ಈ ಅಭಿಯಾನ ಫಲ ಕೊಡುತ್ತದೆಯೇ ಎಂಬುದು ಸದ್ಯ ಹೇಳಲಾಗದು. ಜಿಲ್ಲೆಯಲ್ಲಿ ಒಕ್ಕಲಿಗರಿಗೆ ಟಿಕೆಟ್ ನೀಡಲು ಬಿಜೆಪಿಗೆ ಈ ಬಾರಿ ಪುತ್ತೂರಲ್ಲಿ ಮಾತ್ರ ಅವಕಾಶವಿದೆ. ಇದು ಮಠಂದೂರರಿಗೆ ಪ್ಲಸ್ ಪಾಯಿಂಟ್. ಇತ್ತೀಚೆಗಷ್ಟೇ ಪುತ್ತೂರಿನಲ್ಲಿ ದೊಡ್ಡ ಮಟ್ಟದ ಒಕ್ಕಲಿಗ ಸಮಾವೇಶ ನಡೆಸಿ ಸ್ವತಃ ಡಾ.ನಿರ್ಮಲಾನಂದನಾಥ ಶ್ರೀಗಳಿಂದಲೇ ಶಹಬ್ಬಾಶ್ ಗಿರಿಯನ್ನು ಸಂಜೀವ ಮಠಂದೂರು ಪಡೆದುಕೊಂಡಿದ್ದರು. 1994ರಲ್ಲಿ ಸೋಲುಂಡ ಕಾಂಗ್ರೆಸ್ 19 ವರ್ಷಗಳ ಬಳಿಕ 2013ರಲ್ಲಿ ಪುತ್ತೂರು ಗೆದ್ದಿತ್ತು. ಬಿಜೆಪಿಯಿಂದ ಪಕ್ಷಾಂತರವಾಗಿದ್ದ ಶಕುಂತಳಾ ಶೆಟ್ಟಿ 2013 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದರು. ಅದೇ ಕಾಂಗ್ರೆಸ್ 2018ರಲ್ಲಿ ಮುಗ್ಗರಿಸಿತ್ತು.
ಪುತ್ತೂರು ವಿಧಾನಸಭಾ ಮತಕ್ಷೇತ್ರ ಯಾರ 'ಕೈ'ಗೆ ಟಿಕೆಟ್: ಕಾಂಗ್ರೆಸ್ನಲ್ಲಿ ಕೂಡ ಟಿಕೆಟ್‌ಗಾಗಿ ಪೈಪೋಟಿ ಇದೆ. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಕಾವು ಹೇಮನಾಥ ಶೆಟ್ಟಿ, ದಿವ್ಯಪ್ರಭಾ ಗೌಡ ಚಿಲ್ತಡ್ಕ, ಎಂ.ಎಸ್. ಮಹಮ್ಮದ್, ಮಮತಾ ಗಟ್ಟಿ, ಕೃಪಾ ಅಮರ ಆಳ್ವಾ, ಎಂ.ಬಿ. ವಿಶ್ವನಾಥ ರೈ, ಡಾ.ರಾಜಾರಾಂ ಕೆ.ಬಿ., ಪ್ರಸಾದ್ ಕೌಶಲ್ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಸತೀಶ್ ಕುಮಾರ್ ಕೆಡೆಂಜಿ, ಧನಂಜಯ ಅಡ್ಪಂಗಾಯ, ಭರತ್ ಮುಂಡೋಡಿ ಟಿಕೆಟ್ ಆಕಾಂಕ್ಷಿಗಳಾಗಿದ್ದಲ್ಲದೇ 2 ಲಕ್ಷ ರೂ. ಕಟ್ಟಿ ಅರ್ಜಿ ಹಾಕಿದ್ದರು. ಇಷ್ಟು ಮಂದಿ ಅರ್ಜಿ ಸಲ್ಲಿಸಿ ಟಿಕೆಟ್‌ಗಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ಹಠಾತ್ ಬೆಳವಣಿಗೆಯೊಂದು ನಡೆದಿದ್ದು ಪುತ್ತೂರು ಕಾಂಗ್ರೆಸ್ನಲ್ಲಿ ಟಿಕೆಟ್ ಹಂಚಿಕೆ ಜಟಿಲ ಎನ್ನಿಸುತ್ತಿದೆ. 2018 ರಲ್ಲಿ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಅವರ ಆಪ್ತ ಅಶೋಕ್ ರೈ ಅವರು ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಗೊಂಡರು. ಪರಿಣಾಮ ಕೈ ಪಾಳಯದಲ್ಲಿ ಟಿಕೆಟ್ ಆಕಾಂಕ್ಷಿತರ ಪಟ್ಟಿ ದೊಡ್ಡದಾಗಿದೆ.
ಅಶೋಕ್ ಕುಮಾರ್ ರೈ ಕಾಂಗ್ರೆಸ್ ಸೇರಿದ್ದಲ್ಲದೆ, 2 ಲಕ್ಷ ರೂ. ನಿಧಿ ಸಮರ್ಪಿಸಿ 14ನೇ ಆಕಾಂಕ್ಷಿಯಾಗಿ ಅಧಿಕೃತವಾಗಿ ಕೆಪಿಸಿಸಿ ಪಟ್ಟಿಯಲ್ಲಿಯೂ ಕಾಣಿಸಿಕೊಂಡಿದ್ದಾರೆ. ಪ್ರಜಾಧ್ವನಿ ಯಾತ್ರೆಯಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದ ಅಶೋಕ್ ರೈ, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಆಗಲಿದ್ದಾರೆ ಎಂಬ ಮಾತು ಕೂಡ ಕೇಳಿಬರುತ್ತಿವೆ.
ಅಶೋಕ್ ರೈ ಹೆಸರು ಕೇಳುತ್ತಿದ್ದಂತೆ ಇತರರು ದಂಗಾಗಿದ್ದಾರೆ. ರೈಗೆ ಟಿಕೆಟ್ ಪಕ್ಕಾ. ಹೈಕಮಾಂಡ್ ಸಮ್ಮತಿಸಿದ ಬಳಿಕವೇ ಅವರು ಕಾಂಗ್ರೆಸ್ಗೆ ಬಂದಿದ್ದಾರೆ ಎಂಬಿತ್ಯಾದಿ ಮಾತುಗಳಿವೆ. ಆದರೆ, ಇತರ ಆಕಾಂಕ್ಷಿಗಳು ಇದನ್ನು ಒಪ್ಪುತ್ತಿಲ್ಲ. ಕೆಲವರಂತೂ ಬಹಿರಂಗ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈಗಷ್ಟೇ ಬಂದವರನ್ನು ಬಿಟ್ಟು ಇರುವವರಲ್ಲೇ ಒಬ್ಬರನ್ನು ಆರಿಸಿ ಎಂಬ ವಾದವೂ ಇದೆ. ಈ ನಡುವೆ, ಮೂರ್ನಾಲ್ಕು ಚುನಾವಣೆಗಳಿಂದ ಕಾಂಗ್ರೆಸ್ನಿಂದ ಟಿಕೆಟ್ ಕೇಳುತ್ತಲೇ ಇರುವ ಕಾವು ಹೇಮನಾಥ ಶೆಟ್ಟಿ ಈ ಸಲವೂ ಪ್ರಬಲ ಆಕಾಂಕ್ಷಿ.
ಇವರು ತನಗೆ ಟಿಕೆಟ್ ಪಕ್ಕಾ ಎಂಬ ಭರವಸೆ ಹೊಂದಿದ್ದು, ಅಭಿಮಾನಿ ಬಳಗವೂ ಗಟ್ಟಿ ಇದೆ. ಒಕ್ಕಲಿಗ ಮತ್ತು ಮಹಿಳೆ ಎಂಬ ಡಬ್ಬಲ್ ಟ್ರಂಪ್ ಕಾರ್ಡ್ ಹೊಂದಿರುವ ದಿವ್ಯಪ್ರಭಾ ಚಿಲ್ತಡ್ಕ ಕ್ಷೇತ್ರದಲ್ಲಿ ಸಾಕಷ್ಟು ಓಡಾಡಿಕೊಂಡು ಅಭಿಮಾನಿ ಬಳಗ ಕಟ್ಟುತ್ತಿದ್ದಾರೆ. ಪಕ್ಷ ಸೇರ್ಪಡೆ ಕೂಡ ಮಾಡಿಸುತ್ತಿದ್ದಾರೆ. ಹೈಕಮಾಂಡ್ ಜತೆಗಿನ ಸಂಪರ್ಕ ಅವರ ಆಶಾವಾದ ಜೀವಂತವಿರಿಸಿದೆ. ಮಂಗಳೂರಿನ ಕೃಪಾ ಅಮರ ಆಳ್ವಾ 3 ತಿಂಗಳಿಂದ ಪುತ್ತೂರಿನಲ್ಲಿ ಕಾಣಿಸುತ್ತಿದ್ದು, ಅಲ್ಲಲ್ಲಿ ಬ್ಯಾನರ್ ಹಾಕಿಸಿದ್ದಾರೆ. ಇನ್ನು ಜೆಡಿಎಸ್ನಿಂದ ಯಾವುದೇ ನಿರ್ಧಾರ ಆಗಿಲ್ಲ. ಎಸ್ಡಿಪಿಐ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ ಅವರು ಜೈಲಿನಿಂದಲೇ ಸ್ಪರ್ಧಿಸಲಿದ್ದಾರೆ. ಹಾಗಾಗಿ, ಚುನಾವಣೆ ಘೋಷಣೆಯ ಮುಂಚೆಯೇ ಟಿಕೆಟ್ ವಿಚಾರದಲ್ಲಿ ಪುತ್ತೂರು ಸುದ್ದಿಯಲ್ಲಿದೆ.
ಇದನ್ನೂ ಓದಿ:ಮಾಯಕೊಂಡ ಕ್ಷೇತ್ರದಲ್ಲಿ ಬಿಜೆಪಿ ಗುಜರಾತ್ ಮಾಡೆಲ್ ಟಿಕೆಟ್ ಹಂಚಿಕೆ ಸದ್ದು: ಗೆಲ್ಲಲು ಕಾಂಗ್ರೆಸ್ ಪ್ರತಿತಂತ್ರ