ಮಂಗಳೂರು:ನಮೀಬಿಯಾದಿಂದ ಭಾರತಕ್ಕೆ ಚೀತಾಗಳನ್ನು ವಿಮಾನದಲ್ಲಿ ಯಶಸ್ವಿಯಾಗಿ ಕರೆತರಲಾಗಿದೆ. 70 ವರ್ಷಗಳ ಬಳಿಕ 8 ವಿದೇಶಿ ಅತಿಥಿಗಳು ಭಾರತದ ನೆಲದಲ್ಲಿ ಹೆಜ್ಜೆ ಇಟ್ಟಿವೆ. ಈ ಪ್ರಾಣಿಗಳನ್ನು ಕರೆತಂದ ತಂಡದಲ್ಲಿ ಏಕೈಕ ಕನ್ನಡಿಗ ಪುತ್ತೂರಿನ ವ್ಯಕ್ತಿಯೊಬ್ಬರು ಕರ್ತವ್ಯ ನಿರ್ವಹಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಪ್ರತಿಷ್ಠಿತ ಮುಳಿಯ ಮನೆತನದ ಡಾ.ಸನತ್ ಕೃಷ್ಣ ಮುಳಿಯ ಪ್ರಾಜೆಕ್ಟ್ ಚೀತಾ ತಂಡದಲ್ಲಿ ಇದ್ದವರು. ಇವರು ಈ ತಂಡದ ಪ್ರಮುಖ ವನ್ಯಜೀವಿ ಅರಿವಳಿಕೆ ತಜ್ಞರಾಗಿದ್ದರು. ದೆಹಲಿಯ ನ್ಯಾಷನಲ್ ಝೂಲಾಜಿಕಲ್ ಪಾರ್ಕ್‌ನ ಅಸಿಸ್ಟೆಂಟ್ ವೆಟರ್ನರಿಯಲ್ಲಿ ಅಧಿಕಾರಿಯಾಗಿರುವ ಇವರು ಭಾರತದ ಮೂರು ಮಂದಿಯ ತಂಡದಲ್ಲಿದ್ದರು.
70 ವರ್ಷಗಳ ಬಳಿಕ ಚೀತಾಗಳನ್ನು ನಮೀಬಿಯಾದಿಂದ ಭಾರತಕ್ಕೆ ತರುವ ಯೋಜನೆಯಲ್ಲಿ ಸನತ್ ಕೃಷ್ಣ ಪ್ರಮುಖ ಪಾತ್ರ ವಹಿಸಿದ್ದಾರೆ. ಚೀತಾಗಳಿಗೆ ಸಣ್ಣ ಪ್ರಮಾಣದಲ್ಲಿ ಅರಿವಳಿಕೆ ನೀಡಿ ವಿಶೇಷ ವಿಮಾನದಲ್ಲಿ ಕರೆತರಲಾಗಿತ್ತು. 16 ಗಂಟೆಗಳ ವಿಮಾನದ ಪ್ರಯಾಣದಲ್ಲಿ ಶನಿವಾರ ಚೀತಾದೊಂದಿಗೆ ಈ ತಂಡ ಭಾರತ ತಲುಪಿತ್ತು. ಪ್ರಯಾಣದ ವೇಳೆ ವಿಮಾನದಲ್ಲಿ ಗಂಟೆಗೊಮ್ಮೆ ಚೀತಾಗಳ ಆರೋಗ್ಯ ತಪಾಸಣೆ ನಡೆಸಲಾಗುತ್ತಿತ್ತು.