ಮಂಗಳೂರು:ರಾಜ್ಯ ಸರ್ಕಾರವು ಕಂಬಳಕ್ಕೆ ಅನುದಾನ ನೀಡಲು ಪ್ರಾರಂಭಿಸಿದೆ. ಆದ್ದರಿಂದ ನಿಯಮ, ಶಿಸ್ತಿನೊಂದಿಗೆ ಕಂಬಳ ನಡೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಮೂಡುಬಿದಿರೆ ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಪಿ.ಆರ್.ಶೆಟ್ಟಿ ಹೇಳಿದರು.
ಮೂಡುಬಿದಿರೆ ಜಿಲ್ಲಾ ಕಂಬಳ ಸಮಿತಿಯ ಮಹಾಸಭೆಯಲ್ಲಿ ಮಾತನಾಡಿದ ಅವರು, ಈ ಬಾರಿ ಕೊರೊನಾ ಸೋಂಕು ಭೀತಿಯ ನಡುವೆಯೂ ಕಂಬಳ ನಡೆಯುವಲ್ಲಿ ಸಂಬಂಧಪಟ್ಟ ಎಲ್ಲ ವರ್ಗದವರ ಪ್ರೋತ್ಸಾಹದಿಂದ ಎಲ್ಲಾ ಕಂಬಳವು ನಿರಾತಂಕವಾಗಿ ನಡೆಯಿತು ಎಂದರು.
'ತೀರ್ಪುಗಾರರ ಕಾಲೆಳೆಯುವ ಪ್ರಯತ್ನ ಸರಿಯಲ್ಲ'
ಕಂಬಳ ಅಕಾಡೆಮಿಯ ಸಂಚಾಲಕ ಗುಣಪಾಲ ಕಡಂಬ ಮಾತನಾಡಿ, ಕಂಬಳದಲ್ಲಿ ತೊಡಗಿಸುವ ಪ್ರತಿಯೊಬ್ಬರೂ ತಮ್ಮ ಕರ್ತವ್ಯ ಪ್ರಜ್ಞೆಯನ್ನು ಮೆರೆದಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಂಬಳಕ್ಕೆ ಹೆಸರು ಬರುತ್ತಿರುವುದರಿಂದ ಯಾವುದೇ ಲೋಪಗಳಾಗದ ರೀತಿಯಲ್ಲಿ ನಾವು ಜವಾಬ್ದಾರಿಯಿಂದ ಮುನ್ನಡೆಯಬೇಕಾಗಿದೆ. ಕಂಬಳದಲ್ಲಿ ತೀರ್ಪುಗಾರರ ಕಾಲೆಳೆಯುವ ಪ್ರಯತ್ನಗಳು ನಡೆಯುತ್ತಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಪಿ.ಆರ್.ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಮುಖವಾಗಿ ಶಿಸ್ತು, ನಿಯಮ ರೂಪಿಸುವ ಸಮಿತಿ ರಚನೆ, ಕಂಬಳದ ಸಂದರ್ಭದಲ್ಲಿ ನಡೆಯುವ ಲೋಪಗಳನ್ನು ಸರಿಪಡಿಸಲು ಅನುಸರಿಸಬೇಕಾದ ಮಾರ್ಗಸೂಚಿಗಳ ಬಗ್ಗೆ ಚರ್ಚಿಸಲಾಯಿತು. ತಿಂಗಳೊಳಗೆ ನಿಯಮಗಳನ್ನು ರೂಪಿಸುವ ಸಮಿತಿಯನ್ನು ರಚಿಸಿ, ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ನಿರ್ಧರಿಸಲಾಯಿತು.
ಮುಂದಿನ ಸಭೆಯಲ್ಲಿ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡುವುದರ ಕುರಿತು ನಿರ್ಧಾರ ತೆಗೆದುಕೊಳ್ಳಲಾಯಿತು.