ಕರ್ನಾಟಕ

karnataka

ETV Bharat / state

ಕಂಬಳ ಅಕಾಡೆಮಿಯಿಂದ 33 ಯುವಕರಿಗೆ ಕಂಬಳ ಓಟದ ತರಬೇತಿ ಕಾರ್ಯಾಗಾರ

ಶಿಬಿರಾರ್ಥಿಗಳಾಗಿ ಪಾಲ್ಗೊಳ್ಳಲು ಒಂದಷ್ಟು ಮಾನದಂಡಗಳಿವೆ. ಮುಖ್ಯವಾಗಿ ತರಬೇತಿಗೆ ಆಯ್ಕೆಯಾಗುವವರು 18-25 ವಯಸ್ಸಿನೊಳಗಿನವರಾಗಬೇಕು. ಪದವಿ ಪಡೆದವರಿಗಿಂತ ಕಡಿಮೆ ‌ಓದಿದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಯಾಕೆಂದರೆ, ಶಿಬಿರಾರ್ಥಿಗಳು ಕಂಬಳ ಓಟದ ತರಬೇತಿ ಪಡೆದ ಬಳಿಕ ಕಂಬಳದಲ್ಲಿಯೇ ಇರಬೇಕೆಂಬ ಉದ್ದೇಶ ಇದರಲ್ಲಿ ಅಡಕವಾಗಿದೆ. ಈ ಬಾರಿ 219 ಮಂದಿ ಶಿಬಿರಾರ್ಥಿಗಳಾಗಿ ಭಾಗವಹಿಸಲು ಇಚ್ಛೆ ಹೊಂದಿದ್ದರೂ, ತರಬೇತಿಗೆ 33 ಮಂದಿಯನ್ನು ಮಾನದಂಡದ ಆಧಾರದಲ್ಲಿ ಆಯ್ಕೆ ಮಾಡಲಾಗಿದೆ..

ಯುವಕರಿಗೆ ಕಂಬಳ ಓಟದ ತರಬೇತಿ ಕಾರ್ಯಯೋಜನೆ
ಯುವಕರಿಗೆ ಕಂಬಳ ಓಟದ ತರಬೇತಿ ಕಾರ್ಯಯೋಜನೆ

By

Published : Oct 1, 2021, 8:06 PM IST

Updated : Oct 1, 2021, 10:39 PM IST

ಮಂಗಳೂರು :ಕರಾವಳಿ ಕರ್ನಾಟಕದ ಪ್ರಸಿದ್ಧ ಜನಪದ ಕ್ರೀಡೆ ಕಂಬಳ. ಕಾಸರಗೋಡಿನಿಂದ ಬಾರಕೂರುವರೆಗೆ ಕಂಬಳದ ವ್ಯಾಪ್ತಿಯಿದೆ‌. ನೂರಾರು ವರ್ಷಗಳ ಇತಿಹಾಸವಿರುವ ಕಂಬಳವನ್ನು ಇದೀಗ ಅತ್ಯಂತ ಶಿಸ್ತುಬದ್ಧ ಹಾಗೂ ವ್ಯವಸ್ಥಿತ ಚೌಕಟ್ಟಿನಡಿಗೆ ತರಲು ಕಂಬಳ‌ ಅಕಾಡೆಮಿಯು ಕಂಬಳ‌ ಓಟ ತರಬೇತಿ ಕಾರ್ಯಾಗಾರ ಆಯೋಜಿಸುತ್ತಿದೆ.

ಕಂಬಳ ಅಕಾಡೆಮಿ ಕಳೆದ ಆರು ವರ್ಷಗಳಿಂದ ಆಸಕ್ತ ಯುವಕರಿಗೆ ಒಂದಷ್ಟು ಮಾನದಂಡದ ಆಧಾರದಲ್ಲಿ ಕಂಬಳ‌ ತರಬೇತಿ ನೀಡುತ್ತಿದೆ. ಈ ಬಾರಿ ಮೂಡುಬಿದಿರೆಯ ಕಡಲಕೆರೆಯಲ್ಲಿರುವ ಕೋಟಿ-ಚೆನ್ನಯ ಜೋಡುಕರೆಯ ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ ಈ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ.

ಯುವಕರಿಗೆ ಕಂಬಳ ಓಟದ ತರಬೇತಿ ಕಾರ್ಯಾಗಾರ

ಹಿಂದಿನ‌ ಐದು ವರ್ಷಗಳಲ್ಲಿ 10 ದಿನಗಳಿದ್ದ ಕಂಬಳ ತರಬೇತಿ ಕಾರ್ಯಾಗಾರವನ್ನು ಈ ವರ್ಷದಿಂದ 15 ದಿನಗಳಿಗೆ ಏರಿಸಲಾಗಿದೆ. ಈ ಬಾರಿ ಸೆ.19 ರಿಂದ ಅ.4ರವರೆಗೆ 15 ದಿನಗಳ ಕಾಲ ತರಬೇತಿ ಶಿಬಿರ ಆಯೋಜಿಸಲಾಗಿದೆ.‌

ಶಿಬಿರಾರ್ಥಿಗಳಾಗಿ ಪಾಲ್ಗೊಳ್ಳಲು ಒಂದಷ್ಟು ಮಾನದಂಡಗಳಿವೆ. ಮುಖ್ಯವಾಗಿ ತರಬೇತಿಗೆ ಆಯ್ಕೆಯಾಗುವವರು 18-25 ವಯಸ್ಸಿನೊಳಗಿನವರಾಗಬೇಕು. ಪದವಿ ಪಡೆದವರಿಗಿಂತ ಕಡಿಮೆ ‌ಓದಿದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.

ಯಾಕೆಂದರೆ, ಶಿಬಿರಾರ್ಥಿಗಳು ಕಂಬಳ ಓಟದ ತರಬೇತಿ ಪಡೆದ ಬಳಿಕ ಕಂಬಳದಲ್ಲಿಯೇ ಇರಬೇಕೆಂಬ ಉದ್ದೇಶ ಇದರಲ್ಲಿ ಅಡಕವಾಗಿದೆ. ಈ ಬಾರಿ 219 ಮಂದಿ ಶಿಬಿರಾರ್ಥಿಗಳಾಗಿ ಭಾಗವಹಿಸಲು ಇಚ್ಛೆ ಹೊಂದಿದ್ದರೂ, ತರಬೇತಿಗೆ 33 ಮಂದಿಯನ್ನು ಮಾನದಂಡದ ಆಧಾರದಲ್ಲಿ ಆಯ್ಕೆ ಮಾಡಲಾಗಿದೆ.

ತರಬೇತಿ ಶಿಬಿರವು ಮುಗಿದ ಬಳಿಕ‌ ತರಬೇತಿ ಪಡೆದ ಶಿಬಿರಾರ್ಥಿಗಳಿಂದ ಪ್ರಾಯೋಗಿಕ ಕಂಬಳವನ್ನು ಅ.10ರಂದು ಕೋಟಿ-ಚೆನ್ನಯ ಜೋಡುಕರೆ ಕಂಬಳದಲ್ಲಿ‌ ಆಯೋಜಿಸಲಾಗುತ್ತದೆ. ಈ ತರಬೇತಿ ಶಿಬಿರಕ್ಕೆ ಒಟ್ಟು 7ಲಕ್ಷ ರೂ. ಗೂ ಅಧಿಕ ಖರ್ಚು ಇದ್ದರೂ, ಎಲ್ಲರಿಗೂ ಉಚಿತ ತರಬೇತಿಯನ್ನೇ ನೀಡಲಾಗುತ್ತಿದೆ.

ಶಿಬಿರಾರ್ಥಿಗಳಿಗೆ ಯೋಗ ತರಬೇತಿ, ರಾಷ್ಟ್ರೀಯ ತರಬೇತುದಾರರಿಂದ ವ್ಯಾಯಾಮ, ಅನುಭವಿ ಓಟಗಾರರಿಂದ ಕಂಬಳದ ಕೆರೆಯಲ್ಲಿ‌ ಕಂಬಳ ಓಟಕ್ಕೆ ತಯಾರಿ ಯಾವ ರೀತಿ ನಡೆಸುವುದು, ಕೋಣಗಳನ್ನ ಸಾಕುವುದು, ನಿರ್ವಹಣೆ, ಕಂಬಳದ ‌ಆರು ತರಹದ ಹಗ್ಗ ನೇಯುವುದು, ಕಂಬಳದ ಬೆತ್ತ ನೇಯುವ ತರಬೇತಿ ನೀಡಲಾಗುತ್ತದೆ.

ಅಲ್ಲದೆ ಸಾಯಂಕಾಲ ಶಿಬಿರಾರ್ಥಿಗಳ ವ್ಯಕ್ತಿತ್ವ ವಿಕಸನದ ಉದ್ದೇಶದಿಂದ ಒಂದೊಂದು ದಿನ ಮನಃಶಾಸ್ತ್ರ, ಆಹಾರ ಪದ್ಧತಿ, ತುಳುನಾಡು ಸಂಸ್ಕೃತಿ, ವ್ಯಾಯಾಮ ಇತ್ಯಾದಿ ವಿಚಾರಗಳ ಬಗ್ಗೆ ಉಪನ್ಯಾಸ ನೀಡಲಾಗುತ್ತದೆ. ಕಂಬಳ ತರಬೇತಿ‌ ಅಕಾಡೆಮಿಯ ಸಂಚಾಲಕ ಕೆ.ಗುಣಪಾಲ ಕಡಂಬ ಮಾತನಾಡಿ, ಪುರುಷ ಪ್ರಧಾನ ಕಂಬಳದಲ್ಲಿ ಮಹಿಳೆಯರಿಗೂ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ ಮಹಿಳೆಯರಿಗೂ ತರಬೇತಿ ನೀಡುವ ಕಾರ್ಯವನ್ನು ಈ ವರ್ಷದಿಂದ ಮಾಡುತ್ತಿದ್ದೇವೆ.

ಐವರು ಕುಟುಂಬಸ್ಥರು ತಮ್ಮ ಮನೆಯ ಹೆಣ್ಣು ಮಕ್ಕಳಿಗೆ ಕಂಬಳ ಓಟದ ತರಬೇತಿ ಒದಗಿಸಬೇಕೆಂಬ ಇಚ್ಛೆ ಹೊಂದಿದ್ದಾರೆ‌. ಹಾಗಾಗಿ, ಆ ಹೆಣ್ಣು ಮಕ್ಕಳಿಗೆ ಅವರ ಮನೆಯ ಕೋಣಗಳಿಂದಲೇ ತರಬೇತಿ ನೀಡಲು ತಯಾರಿ ನಡೆಸುತ್ತಿದ್ದೇವೆ ಎಂದು ಹೇಳಿದರು.

Last Updated : Oct 1, 2021, 10:39 PM IST

ABOUT THE AUTHOR

...view details