ಬಂಟ್ವಾಳ: ಇಡೀ ದೇಶದಲ್ಲಿ ಕರ್ನಾಟಕ ಭಯೋತ್ಪಾದಕರ ಕೇಂದ್ರವಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದ್ದು, ನಾನು ಯಾವುದೇ ಒಂದು ಜಾತಿ ಮತ ಎಂದು ಹೇಳುತ್ತಿಲ್ಲ, ಒಟ್ಟು ಭಯೋತ್ಪಾದನೆ ಎಂದು ಏನಿದೆಯೋ ಇದು ಸಮಾಜವನ್ನು ನಾಶ ಮಾಡುವ ಪ್ರಕ್ರಿಯೆ. ಇದು ಜಗತ್ತಿಗೇ ಮಾರಕವಾದ ಸಂಗತಿ ಎಂದು ಆರ್ಎಸ್ಎಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.
ಬಂಟ್ವಾಳದಲ್ಲಿ ಸೋಮವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ಕಡೆಯಲ್ಲಿದ್ದ ಹಾಗೆ ಮಂಗಳೂರಿನಲ್ಲೂ ಭಯೋತ್ಪಾದನೆಯ ಕೇಂದ್ರವಿದೆ. ಶರತ್ ಮಡಿವಾಳ, ಪ್ರವೀಣ್ ನೆಟ್ಟಾರು, ಹರ್ಷ ಹತ್ಯೆ ಹಿಂದೆ ಭಾರಿ ದೊಡ್ಡ ಭಯೋತ್ಪಾದಕರ ಗುಂಪು ಕೆಲಸ ಮಾಡುತ್ತಿದೆ. ಇದಕ್ಕಾಗಿ ಹಳ್ಳಿ ಹಳ್ಳಿಗಳಲ್ಲಿ ಟ್ರೈನಿಂಗ್ ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದೊಂದು ಕೇಂದ್ರವಾಗುತ್ತಿದೆ.
ಭಯೋತ್ಪಾದನೆ ದೊಡ್ಡ ಪ್ರಮಾಣದಲ್ಲಿ ಆಗುವುದನ್ನು ತಡೆಗಟ್ಟದಿದ್ದರೆ ಸರ್ವನಾಶವಾಗುತ್ತದೆ. ಇದರ ಮೂಲವನ್ನು ಶೋಧಿಸಬೇಕು ಎಂದು ಹೇಳಿದ ಡಾ. ಭಟ್, ಈಗ ಅವರು ಸುಮ್ಮನೆ ಕುಳಿತಿದ್ದಾರೆ ಎಂದರೆ ಚಿಂತನೆ ಬದಲಾಗಿದೆ ಎಂದಲ್ಲ, ಸರಕಾರ ಹೆಚ್ಚು ಮುತುವರ್ಜಿಯಲ್ಲಿ ಕೆಲಸ ಮಾಡಬೇಕು. ಭಯೋತ್ಪಾದಕರ ಮೂಲ ಶೋಧಿಸಬೇಕು, ಇದರ ಹಿಂದೆ ಭಾರಿ ದೊಡ್ಡ ಜಾಲವಿದೆ. ಹಿಜಾಬ್ ಪ್ರಕರಣವಾದಾಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದನ್ನು ಗಮನ ಸೆಳೆಯಲಾಯಿತು.