ಮಂಗಳೂರು: ದಕ್ಷಿಣಕನ್ನಡ ಜಿಲ್ಲೆ ಬಿಜೆಪಿ,ಆರ್ಎಸ್ಎಸ್ನ ಪ್ರಯೋಗ ಶಾಲೆಯಾಗಿದೆ. ಡಿಕೆಶಿಯವರ ಯಾವುದೇ ರಾಜಕೀಯ ವಿಚಾರಗಳನ್ನು ಧರ್ಮಕ್ಕೆ ಎಳೆದರೆ, ನಾವು ಬಿಜೆಪಿಗರಿಗೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ ಎಂದು ಕಾಂಗ್ರೆಸ್ ದ.ಕ ಜಿಲ್ಲಾ ಸಮಿತಿಯ ಪ್ರಚಾರ ಅಧ್ಯಕ್ಷ ಧನಂಜಯ ಅಡ್ಪಂಗಾಯ ಹೇಳಿದ್ದಾರೆ.
ಕನಕಪುರದ ಕಪಾಲಿ ಬೆಟ್ಟದ ಮೇಲೆ ಏಸುಕ್ರಿಸ್ತನ ಪ್ರತಿಮೆ ಸ್ಥಾಪನೆಗೆ ನಮ್ಮ ಜಿಲ್ಲೆಯ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರು ಕೋಮು ಭಾವನೆ ಕೆರಳಿಸುವ ಹೇಳಿಕೆ ನೀಡಿದ್ದಾರೆ. ಏಸು ಪ್ರತಿಮೆಯನ್ನು ವಿರೋಧಿಸಿ ಪ್ರಭಾಕರ ಭಟ್ ಅವರು ದ.ಕ.ಜಿಲ್ಲೆಯಿಂದ ಎಷ್ಟು ಜನರನ್ನು ಅಲ್ಲಿಗೆ ಕರೆದೊಯ್ದು, ಪ್ರತಿಭಟನೆ ನಡೆಸಿದ್ದಾರೋ ಅದೇ ರೀತಿ ನಾವು ಕೂಡ ಸುಳ್ಯ, ಪುತ್ತೂರು, ಬೆಳ್ತಂಗಡಿಯ ಜನರನ್ನು ಸೇರಿಸಿ ಆ ಪ್ರತಿಭಟನೆಗೆ ಸರಿಯಾದ ಉತ್ತರ ನೀಡಲಿದ್ದೇವೆ ಎಂದರು.
ಕಾಂಗ್ರೆಸ್ ದ.ಕ.ಜಿಲ್ಲಾ ಸಮಿತಿಯ ಪ್ರಚಾರಧ್ಯಕ್ಷ ಧನಂಜಯ ಅಡ್ಪಂಗಾಯ.. ವಿವೇಕಾನಂದ, ಗಾಂಧಿ, ನೆಹರೂ ಅವರಂತ ಸಾತ್ವಿಕ ಗುಣಗಳಿಂದ ನಮ್ಮ ಭಾರತಕ್ಕೆ ಇಡೀ ಪ್ರಪಂಚದಲ್ಲಿಯೇ ಒಂದು ಗೌರವವಿದೆ. ಅಮೆರಿಕಾದಲ್ಲಿ ಹಿಂದೂ ದೇವಾಲಯ, ಮಠ, ಮಂದಿರಗಳಿವೆ. ಇಸ್ಲಾಂ ರಾಷ್ಟ್ರ ಇಂಡೋನೇಷ್ಯಾದ ಬಾಲಿ ದ್ವೀಪದಲ್ಲಿ ಕೃಷ್ಣ ಅರ್ಜುನನಿಗೆ ಗೀತೋಪದೇಶ ಬೋಧನೆ ಮಾಡುವ ಬಹುದೊಡ್ಡ ಪ್ರತಿಮೆಯಿದೆ. ಮಲೇಷ್ಯಾದಲ್ಲಿ ಅತೀದೊಡ್ಡ ಸುಬ್ರಹ್ಮಣ್ಯ ದೇವಾಲಯವಿದೆ.
ಅಲ್ಲದೆ ಮಲೇಷ್ಯಾಯಾದಲ್ಲಿ ಮುಸ್ಲಿಂ ಸರ್ಕಾರವಿದ್ದರೂ ಹಿಂದೂಗಳಿಗೆ ಅಲ್ಲಿ ಶೇ.5% ಉದ್ಯೋಗ ಮೀಸಲಾತಿಯಿದೆ. ದುಬೈನಲ್ಲಿ ಹಿಂದೂ ದೇವಾಲಯವನ್ನು ಮೋದಿ-ಅಮಿತ್ ಶಾ ಅವರ ಸಮ್ಮುಖದಲ್ಲೇ ಪ್ರತಿಷ್ಠಾಪನೆ ಮಾಡಿರೋದು ಎಲ್ಲರಿಗೂ ತಿಳಿದಿದೆ. ಈ ನಿಟ್ಟಿನಲ್ಲಿ ಡಿಕೆಶಿಯವರು ಕಪಾಲ ಬೆಟ್ಟದ ಮೇಲೆ ಏಸು ಪ್ರತಿಮೆ ಸ್ಥಾಪಿಸಲು ಬೆಂಬಲ ನೀಡಿರೋದನ್ನು ವಿರೋಧಿಸಿ, ಚಾರಿತ್ರ್ಯ ವಧೆ ಮಾಡಲು ಕಲ್ಲಡ್ಕ ಪ್ರಭಾಕರ ಭಟ್ ಹೋರಾಟ ಮಾಡಲು ಇಳಿದಿರೋದು ವಿಷಾಧನೀಯ. ಇದರಿಂದ ಇಡೀ ಸಮಾಜದಲ್ಲಿ ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಧರ್ಮದವರು ಅಪ ನಂಬಿಕೆಯಿಂದ ಬದುಕುವ ಸ್ಥಿತಿ ಎದುರಾಗಿದೆ ಎಂದರು.