ಮಂಗಳೂರಿನ ಕರಾವಳಿ ಕಾಲೇಜಿನಲ್ಲಿ ಫ್ಯಾಷನ್ ಶೋ ಸ್ಪರ್ಧೆ : ಗಮನ ಸೆಳೆದ ವಿದ್ಯಾರ್ಥಿಗಳ ಥೀಮ್ ಮಂಗಳೂರು : ಫ್ಯಾಷನ್ ಶೋ ಎಂದರೆ ಮೈಮಾಟ ತೋರಿಸಿ ಕ್ಯಾಟ್ ವಾಕ್ ಮಾಡುವುದು ಸಾಮಾನ್ಯವಾಗಿ ನಡೆಯುತ್ತಿರುತ್ತದೆ. ಆದರೆ ಮಂಗಳೂರಿನ ಕಾಲೇಜೊಂದರಲ್ಲಿ ವಿಭಿನ್ನವಾಗಿ ಫ್ಯಾಷನ್ ಶೋ ಸ್ಪರ್ಧೆ ನಡೆಯಿತು.
ನಗರದ ಕೊಟ್ಟಾರ ಚೌಕಿಯಲ್ಲಿರುವ ಪ್ರತಿಷ್ಠಿತ ಕರಾವಳಿ ಕಾಲೇಜಿನಲ್ಲಿ ಪ್ರತಿ ವರ್ಷ ಕೈಜನ್ ಎಂಬ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತದೆ. ಕರಾವಳಿ ಗ್ರೂಪ್ ಆಫ್ ಕಾಲೇಜಿನ ಸಂಸ್ಥಾಪಕ ಎಸ್. ಗಣೇಶ್ ರಾವ್ ಅವರ ಹುಟ್ಟುಹಬ್ಬದ ಪ್ರಯುಕ್ತ ನಡೆಯುವ ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರತಿ ವರ್ಷ ಫ್ಯಾಷನ್ ಶೋ ಜರುಗುತ್ತದೆ. ಇಂದು ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಫ್ಯಾಷನ್ ಶೋ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.
ಕರಾವಳಿ ಗ್ರೂಪ್ ಆಫ್ ಕಾಲೇಜ್ನ, ಕರಾವಳಿ ಫ್ಯಾಷನ್ ಡಿಸೈನಿಂಗ್, ಇಂಜಿನಿಯರಿಂಗ್, ಇಂಟಿರಿಯರ್ ಡಿಸೈನಿಂಗ್, ಹೋಟೆಲ್ ಮ್ಯಾನೇಜ್‌ಮೆಂಟ್, ಫಾರ್ಮಸಿ, ಬಿಪಿಟಿ, ನರ್ಸಿಂಗ್ ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಫ್ಯಾಷನ್ ಶೋ ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು. ವಿದ್ಯಾರ್ಥಿಗಳಿಂದ ಈ ಫ್ಯಾಷನ್ ಶೋ ಝಲಕ್ ಎಲ್ಲರ ಗಮನ ಸೆಳೆಯಿತು.
ವಿವಿಧ ವಿಭಾಗದ ಎಂಟು ವಿದ್ಯಾರ್ಥಿಗಳ ತಂಡದವರು ಈ ಫ್ಯಾಷನ್ ಶೋ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಈ ವೇಳೆ ವಿವಿಧ ಥೀಮ್ ಗಳನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು. ಕೆಲವು ತಂಡಗಳು ವಿವಿಧ ಪ್ರದೇಶಗಳ ಸಂಸ್ಕೃತಿಯನ್ನು ಪ್ರದರ್ಶಿಸುವ ಪ್ರಯತ್ನ ಮಾಡಿದರೆ, ಇನ್ನೂ ಕೆಲವು ತಂಡಗಳು ದೇಶದ ವಿವಿಧ ಭಾಗಗಳ ವಿಭಿನ್ನ ಬಗೆಯ ವೇಷಭೂಷಣಗಳನ್ನು ಪ್ರಸ್ತುತ ಪಡಿಸಿದರು.
ಈ ಬಗ್ಗೆ ಕರಾವಳಿ ಕಾಲೇಜಿನ ಉಪನ್ಯಾಸಕಿ ಲಿಖಿತಾ ಮಾತನಾಡಿ, ಬೇರೆ ಬೇರೆ ವಿಭಾಗದ ವಿದ್ಯಾರ್ಥಿಗಳು ಫ್ಯಾಶನ್ ಶೋನಲ್ಲಿ ಭಾಗವಹಿಸಿದ್ದಾರೆ. ವಿವಿಧ ರಾಜ್ಯಗಳ ಉಡುಗೆ ತೊಡುಗೆಗಳನ್ನು ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಿದ್ದಾರೆ. ಬಾಲಿವುಡ್ ಸ್ಟೈಲ್, ಪ್ರಾದೇಶಿಕ ಉಡುಪುಗಳ ಬಗ್ಗೆಯೂ ಪ್ರಸ್ತುತಪಡಿಸಿದ್ದಾರೆ. ಸ್ಪರ್ಧೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು ಎಂದು ಹೇಳಿದರು.
ಫ್ಯಾಷನ್ ಶೋನಲ್ಲಿ ಭಾಗವಹಿಸಿದ ವಿದ್ಯಾರ್ಥಿನಿ ಜಾಹ್ನವಿ ಮಾತನಾಡಿ, ಫ್ಯಾಷನ್ ಶೋ ಆಯೋಜಿಸಿದ್ದು ತುಂಬಾ ಖುಷಿಯಾಗಿದೆ. ಸ್ಪರ್ಧೆಗೆ ಹೆಚ್ಚಿನ ಸಿದ್ಧತೆಗಳನ್ನು ಮಾಡಿಕೊಂಡಿದ್ದೆವು. ಇದಕ್ಕಾಗಿ ಸಮಯವನ್ನು ನೀಡಿದ್ದು, ಇದಕ್ಕಾಗಿ ಪ್ರಯತ್ನಪಟ್ಟದ್ದು, ಟೀಮ್ ವರ್ಕ್ ಮಾಡಿದ್ದು ಎಲ್ಲಾ ಖುಷಿಯಾಗಿದೆ. ನಾವು ನಮ್ಮ ದೇಶದ ವಿವಿಧ ಸಂಸ್ಕೃತಿಯ ಬಗ್ಗೆ ಬಗ್ಗೆ ಪ್ರಸ್ತುತಪಡಿಸಿದ್ದೇವೆ ಎಂದು ಹೇಳಿದರು.
ಫ್ಯಾಷನ್ ಶೋ ನಲ್ಲಿ ಭಾಗವಹಿಸಿ ಮಾತನಾಡಿದ ವಿದ್ಯಾರ್ಥಿ ಗಗನ್, ಸೀನಿಯರ್, ಜ್ಯೂನಿಯರ್ ಗಳು ಸೇರಿಕೊಂಡು ಈ ಫ್ಯಾಷನ್ ಶೋ ನಲ್ಲಿ ಭಾವಹಿಸುತ್ತಿದ್ದೇವೆ. ನಾನು ಇದೇ ಮೊದಲ ಬಾರಿ ಫ್ಯಾಷನ್ ಶೋನಲ್ಲಿ ಭಾಗವಹಿಸಿದ್ದೇನೆ. ಇದರಿಂದ ಖುಷಿ ಆಗಿದೆ. ನಾವು ವಿವಿಧ ರಾಜ್ಯಗಳ ಮದುವೆಯ ಉಡುಪಿನ ಬಗ್ಗೆ ಪ್ರಸ್ತುತಪಡಿಸಿದ್ದೇವೆ ಎಂದು ಹೇಳಿದರು.
ಇನ್ನು, ಫ್ಯಾಷನ್ ಶೋ ಕಾರ್ಯಕ್ರಮ ವೀಕ್ಷಿಸಲು ಕರಾವಳಿ ಗ್ರೂಪ್ ಆಫ್ ಕಾಲೇಜಿನ ವಿದ್ಯಾರ್ಥಿಗಳು ಆಗಮಿಸಿದ್ದರು. ಫ್ಯಾಷನ್ ಶೋ ವೇಳೆ ಇತರ ವಿದ್ಯಾರ್ಥಿಗಳು ಸ್ಪರ್ಧಿಗಳನ್ನು ಹುರಿದುಂಬಿಸಿದ್ದು ಕಂಡುಬಂತು.
ಇದನ್ನೂ ಓದಿ :ವಿವಾದಕ್ಕೆ ಕಾರಣವಾದ ಅಡ್ಯನಡ್ಕ ಶೈಕ್ಷಣಿಕ ಕಾರ್ಯಾಗಾರ: ವಿಧಾನಸೌಧದಲ್ಲೂ ವಿಷಯ ಪ್ರಸ್ತಾಪ