ಮಂಗಳೂರು: ಸ್ಮಾರ್ಟ್ ಸಿಟಿಯ ವತಿಯಿಂದ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ಸಹಯೋಗದಲ್ಲಿ ಮಂಗಳೂರಿನ ಕದ್ರಿ ಪಾರ್ಕ್ ರಸ್ತೆ ಬಹಳ ವಿನೂತನ ರೀತಿಯಲ್ಲಿ ಸುಮಾರು 12 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ. ನಾಳೆಯಿಂದಲೇ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಮಾಹಿತಿ ನೀಡಿದರು.
ಕದ್ರಿ ಪಾರ್ಕ್ನ ಈ ರಸ್ತೆಯು ಸುಮಾರು 800 ಮೀಟರ್ ಉದ್ದ ಇದ್ದು, ರಸ್ತೆಯಲ್ಲಿ ಡ್ರೈನೇಜ್ ಪೈಪ್ಗಳು, ನೀರಿನ ಪೈಪ್ಗಳು, ಮೇಲ್ಭಾಗದಲ್ಲಿರುವ ವಿದ್ಯುತ್ ತಂತಿಗಳು ಇವೆಲ್ಲವನ್ನು ರಸ್ತೆಯ ಒಂದೇ ಕಡೆಯಲ್ಲಿ ಅಳವಡಿಸಿ ಅಂಡರ್ ಗ್ರೌಂಡ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.
ಈ ರಸ್ತೆಯನ್ನು ಈಸ್ಟ್, ವೆಸ್ಟ್ ಮತ್ತು ಮಿಡಲ್ ಝೋನ್ ಎಂದು ಮೂರು ವಿಭಾಗ ಮಾಡಲಾಗಿದೆ. ಈಸ್ಟ್ ಝೋನ್ ಅಂದ್ರೆ ಕದ್ರಿ ಪೊಲೀಸ್ ಸ್ಟೇಷನ್ನಿಂದ ಆಕಾಶವಾಣಿ ತನಕ ಹೋಗಿ ವಾಹನಗಳು ಯೂ ಟರ್ನ್ ಹಾಕಿ ಬರಬೇಕು. ಅದೇ ರೀತಿ ವೆಸ್ಟ್ ಝೋನ್ ಪದವು ಹೈಸ್ಕೂಲ್ ಪ್ರಾರಂಭದಿಂದ ಗೋರಕ್ಷನಾಥ ಹಾಲ್ ತನಕ ಯೂ ಟರ್ನ್ ಹಾಕಿ ವಾಹನಗಳು ಸಾಗಬೇಕು.
ಅದರ ಮಿಡಲ್ ಝೋನ್ನಲ್ಲಿ ಯಾವುದೇ ವಾಹನ ಚಲಿಸುವಂತಿಲ್ಲ. ಅಲ್ಲಿ ಮಕ್ಕಳಿಗೆ ಆಟ ಆಡುವ ವ್ಯವಸ್ಥೆ ಸೇರಿದಂತೆ, ವಾಕಿಂಗ್ ಟ್ರ್ಯಾಕ್, ಕಾರಂಜಿಗಳು ಹೀಗೆ ಎಲ್ಲರಿಗೂ ಸಮಯವನ್ನು ಕಳೆಯಲು ವಿಶೇಷ ರೀತಿಯ ಅವಕಾಶ ಮಾಡಿ ಕೊಡಲಾಗುವುದು ಎಂದರು.
ಈ ಸಂದರ್ಭ ಮೇಯರ್ ದಿವಾಕರ್ ಪಾಂಡೇಶ್ವರ, ಉಪ ಮೇಯರ್ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶರತ್ ಕುಮಾರ್, ಕಿರಣ್ ಕುಮಾರ್ ಸೇರಿದಂತೆ ಹಲವರಿದ್ದರು.