ಕಡಬ(ದಕ್ಷಿಣ ಕನ್ನಡ):ಕಳೆದ ತಿಂಗಳು ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ನೈಲಾ ಎಂಬಲ್ಲಿ ಆನೆ ದಾಳಿಗೆ ಇಬ್ಬರು ಬಲಿಯಾದ ಬಳಿಕವೂ ಕಡಬ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ಮಾತ್ರ ನಿರಂತರವಾಗಿದ್ದು, ಇಲ್ಲಿನ ಜನರ ಬದುಕನ್ನೇ ತಲ್ಲಣಗೊಳಿಸಿದೆ.
ರಬ್ಬರ್, ಅಡಿಕೆ, ಬಾಳೆ ಸೇರಿದಂತೆ ಕೃಷಿ ತೋಟಗಳಿಗೆ ಕಾಡಾನೆಗಳು ನಿರಂತರವಾಗಿ ಲಗ್ಗೆ ಇಟ್ಟು ಕೃಷಿ ಬೆಳೆಗಳನ್ನು ನಾಶಪಡಿಸುವುದರ ಜೊತೆಗೆ, ಕೃಷಿಗೆ ಅಳವಡಿಸಲಾಗಿರುವ ಪೈಪ್‌ಗಳು, ಸ್ಪಿಂಕ್ಲರ್‌ಗಳು, ರಬ್ಬರ್ ಮರಗಳಿಗೆ ಅಳವಡಿಸಿರುವ ರಬ್ಬರ್ ಹಾಲು ಸಂಗ್ರಾಹಕಗಳು ನಾಶಮಾಡುವುದು ನಿರಂತರವಾಗಿ ನಡೆಯುತ್ತಿದೆ. ಮಾತ್ರವಲ್ಲದೆ ಅಡಿಕೆ ತೋಟಗಳಿಗೆ, ರಬ್ಬರ್ ಟ್ಯಾಪಿಂಗ್‌ಗೆ ಹೋಗಲಾರದ ಸ್ಥಿತಿ ಎದುರಾಗಿದೆ.
ಈಗಾಗಲೇ ಜನರಲ್ಲಿ ಜೀವ ಭಯ ಹುಟ್ಟಿಸಿರುವ ಕಾಡಾನೆಗಳನ್ನು ಹಿಡಿದು ಸ್ಥಳಾಂತರಿಸಲಾಗುವುದು ಎಂದು ಹೇಳಿ ಐದು ಸಾಕಾನೆಗಳನ್ನು ತಂದು ಕಾರ್ಯಾಚರಣೆ ಆರಂಭಿಸಿದ್ದ ಅರಣ್ಯ ಇಲಾಖೆ ಕಾಟಾಚಾರಕ್ಕೆ ಒಂದು ಕಾಡಾನೆಯನ್ನು ಮಾತ್ರ ಸೆರೆಹಿಡಿದು ಮೂರೇ ದಿನಕ್ಕೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತು. ನಂತರದಲ್ಲಿ ವಿಶ್ರಾಂತಿಗೆಂದು ಹೋದ ಸಾಕಾನೆಗಳು ಮತ್ತೆ ಈ ಕಡೆ ಬರಲೇ ಇಲ್ಲ. ಅರಣ್ಯ ಅಧಿಕಾರಿಗಳು ಕಾಡ್ಗಿಚ್ಚಿನ ನೆಪ ಹೇಳಿಕೊಂಡು ಸ್ಥಳದಿಂದ ಕಾಲ್ಕಿತ್ತರು.
ಆದರೆ ಬಹುತೇಕ ಕಡೆಗಳಲ್ಲಿ ಕಾಡ್ಗಿಚ್ಚು ಇನ್ನೂ ನಿಯಂತ್ರಣಕ್ಕೇ ಬಂದಿಲ್ಲ. ಇದರಿಂದಾಗಿ ಇನ್ನೊಂದು ಕಡೆ ವಿಷಯುಕ್ತ ಹಾವುಗಳು ಹಾಗೂ ಇತರ ಕಾಡುಪ್ರಾಣಿಗಳು ಇನ್ನೂ ಹೆಚ್ಚಾಗಿ ಜನವಸತಿ ಸ್ಥಳಗಳಿಗೆ ಬರಲು ಆರಂಭಿಸಿವೆ. ಇದು ಕೂಡಾ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕಡಬದ ರೆಂಜಿಲಾಡಿ ಘಟನೆಯಿಂದಾಗಿ ಆಕ್ರೋಶಗೊಂಡಿದ್ದ ಸ್ಥಳೀಯ ಜನರು ಕಾಡಾನೆಗಳ ಹಾವಳಿಯನ್ನು ಸಂಪೂರ್ಣ ತಡೆಯಲು ಕ್ರಮ ಕೈಗೊಳ್ಳಬೇಕು, ಜನರನ್ನು ಬಲಿ ಪಡೆದ ಆನೆಗಳನ್ನು ಸೆರೆಹಿಡಿಯಬೇಕು ಎಂದು ಪಟ್ಟುಹಿಡಿದು ಸಚಿವ ಎಸ್. ಅಂಗಾರ, ದ.ಕ ಜಿಲ್ಲಾಧಿಕಾರಿ, ಜಿಲ್ಲಾ ಅರಣ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.