ಕಡಬ(ದಕ್ಷಿಣ ಕನ್ನಡ):ರಬ್ಬರ್ ಸಂಶೋಧನಾ ಕೇಂದ್ರದ ವಿಜ್ಞಾನಿಯೊಬ್ಬರು ಕಂಠ ಪೂರ್ತಿ ಕುಡಿದು ತಾಲೂಕಿನ ಹೊಸಮಠ ಹೊಳೆಗೆ ಹಾರಿದ ಘಟನೆ ಬುಧವಾರ ಸಂಜೆ ನಡೆದಿದೆ.
ನದಿಗೆ ಹಾರಿದ ವಿಜ್ಞಾನಿಯನ್ನು ಸಾರ್ವಜನಿಕರು ಮತ್ತು ಕಡಬ ಪೊಲೀಸರು ನೀರಿನಿಂದ ಮೇಲೆತ್ತಿ ರಕ್ಷಣೆ ಮಾಡಿದ್ದಾರೆ. ಇಲ್ಲಿನ ಹೊಸಮಠ ಸೇತುವೆ ಬಳಿ ಬೈಕ್ ನಲ್ಲಿ ಆಗಮಿಸಿದ್ದ ರವಿಚಂದ್ರ ಎಂಬ ತಮಿಳುನಾಡು ಮೂಲದ ವಿಜ್ಞಾನಿ ಕಂಠಪೂರ್ತಿ ಕುಡಿದು ನದಿಗೆ ಹಾರಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಮತ್ತು ಇಬ್ಬರು ಮೆಸ್ಕಾಂ ಸಿಬ್ಬಂದಿ ರಕ್ಷಣೆಗೆ ಮುಂದಾಗಿದ್ದಾರೆ.
ಈ ನಡುವೆ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಕಡಬ ಎಸ್ಐ ರುಕ್ಮ ನಾಯ್ಕ್ ಮತ್ತು ಎಎಸ್ಐ ಸುರೇಶ್, ಸಿಬ್ಬಂದಿ ಕನಕರಾಜ್ ಸೇರಿ ವಿಜ್ಞಾನಿಯನ್ನು ಹೊಳೆಯಿಂದ ಮೇಲೆಕ್ಕೆತ್ತಿ ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ನದಿಯಿಂದ ಮೇಲಕ್ಕೆ ಎತ್ತಿದ ತಕ್ಷಣ ಈತ ಸ್ಥಳದಲ್ಲಿ ದೊಡ್ಡ ರಾದ್ದಾಂತವೇ ಮಾಡಿದ್ದು, ಕೊನೆಗೆ ಕೈಕಾಲು ಕಟ್ಟಿ ಆಸ್ಪತ್ರೆಗೆ ತರಲಾಯಿತು. ಸದ್ಯ ಈತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂಬ ಮಾಹಿತಿ ಲಭಿಸಿದೆ.
ಇನ್ನೂ ತಕ್ಷಣ ಸ್ಪಂದಿಸಿ ಜೀವರಕ್ಷಕರಾದ ಕಡಬ ಪೋಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.