ಕಡಬ:ಯುವಕನೊಬ್ಬನಿಗೆ ಸ್ನಾಪ್ ಡೀಲ್ ಹೆಸರಿನಲ್ಲಿ ಸುಮಾರು ಎಂಟೂವರೆ ಲಕ್ಷ ರೂಪಾಯಿ ಮೌಲ್ಯದ ಕಾರು ಆಫರ್ ಬಂದಿದ್ದು, ಕಳ್ಳರ ಕೈಚಳವನ್ನು ಬೆಳಕಿಗೆ ತರುವಲ್ಲಿ ಯುವಕ ಯಶಸ್ವಿಯೂ ಆಗಿದ್ದಾನೆ.
ಹೌದು, ಆನ್ಲೈನ್ ಶಾಂಪಿಂಗ್ನಲ್ಲಿ ಹೆಸರುವಾಸಿಯಾದ ''ಸ್ನಾಪ್ ಡೀಲ್'' ಹೆಸರಿನಲ್ಲಿ ಈ ಆಫರ್ ಬಂದಿತ್ತಂತೆ. ಹರಿಯಾಣ ಮೂಲದಿಂದ ಕರೆ ಮಾಡಿರುವ ವ್ಯಕ್ತಿ, ತಾನು ಅರುಣ ಎಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ ಯುವಕನ ವಾಟ್ಸಪ್ ಸಂಖ್ಯೆಗೆ ತನ್ನ ಆಧಾರ್ ಕಾರ್ಡ್, ಪಾನ್ ಕಾರ್ಡ್, ಸ್ನಾಪ್ ಡೀಲ್ ಸಂಸ್ಥೆಯ ಐಡಿಯನ್ನು ಕಳುಹಿಸಿದ್ದು, ಕೆಲವು ಲಿಂಕ್ ಒಪನ್ ಮಾಡಿಸಿ ಸ್ನಾಪ್ ಡೀಲ್ ಸಂಸ್ಥೆಯಿಂದಲೇ ಬಂದಿರುವ ಅಧಿಕೃತ ಮಾಹಿತಿ ಎಂದು ನಂಬಿಸುವಷ್ಟರ ಮಟ್ಟದಲ್ಲಿ ಈ ಕಳ್ಳರು ಕರಾಮತ್ತು ಮಾಡಿದ್ದಾರೆ.
ಕಡಬದ ಯುವಕನಿಗೆ ಬಂತು ಕಾರ್ ಆಫರ್... ಜಾಣ್ಮೆಯಿಂದ ಕಳ್ಳರ ಕರಾಮತ್ತಿಗೆ ಕೊಳ್ಳಿ! ಕಾರು ಖರೀದಿಸುವುದು ಕಷ್ಟವಾದಲ್ಲಿ ಮೊತ್ತವನ್ನು ನೀಡುವುದಾಗಿ ಯುವಕ ಸಂತೋಷ್ ಹೆಸರಿಗೆ ಎಂಟು ಲಕ್ಷ ರೂ. ಚೆಕ್ ಸಹ ಬರೆದು ತೋರಿಸಿದ್ದಾನೆ. ಆರಂಭದಲ್ಲಿ ಎಂಟು ಸಾವಿರ ರೂ. ಜಮೆ ಮಾಡುವಂತೆ ಅನಾಮಿಕ ವ್ಯಕ್ತಿಯೊಬ್ಬ ಕರೆ ಮಾಡಿ ತಿಳಿಸಿದ್ದಾನೆ. ಅನುಮಾನವಿದ್ದರೆ ಪೊಲೀಸ್ ಠಾಣೆಗೆ ಹೋಗಿ ಪೊಲೀಸರಿಗೆ ಫೋನ್ ಕೊಡಿ ನಾನು ಮಾತನಾಡುತ್ತೇನೆ ಎಂದು ಜಾಣ್ಮೆ ತೋರಿದ್ದಾನೆ. ಎಚ್ಚರ ವಹಿಸಿದ ಯುವಕ ಮೋಸದ ಜಾಲವನ್ನು ಪತ್ತೆ ಹಚ್ಚಿದ್ದು, ಸ್ನಾಪ್ ಡೀಲ್ ಸಂಸ್ಥೆಗೂ ಕರೆ ಮಾಡಿ ವಿಚಾರಿಸಿದ ವೇಳೆ ಇಂತಹ ಆಫರ್ ಎಂದಿಗೂ ನಾವು ಗ್ರಾಹಕರಿಗೆ ನೀಡುವುದಿಲ್ಲ ಎಂದು ಗ್ರಾಹಕ ಪ್ರತಿನಿಧಿ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂತೋಷ್, ಯಾವುದೇ ಅಪರಿಚಿತ ವ್ಯಕ್ತಿಗಳು ಆಫರ್ ನೀಡುವ ಕರೆ ಅಥವಾ ಸಂದೇಶ ಬಂದಲ್ಲಿ ಎಚ್ಚರಿಕೆ ವಹಿಸಬೇಕು. ಯಾವುದೇ ವೈಯಕ್ತಿಕ ಮಾಹಿತಿ ಮತ್ತು ಬ್ಯಾಂಕ್ ವಿವರಗಳನ್ನು ಯಾವುದೇ ಕಾರಣಕ್ಕೂ ನೀಡಬಾರದು ಎಂದು ಹೇಳಿದ್ದಾರೆ.