ಬೆಳ್ತಂಗಡಿ: ಭಾರತದ ಆರ್ಥಿಕ ಸ್ಥಿತಿ ಉನ್ನತ ಮಟ್ಟಕೇರಲು ಸ್ವದೇಶಿ ಚಿಂತನೆ ಜಾಗೃತಗೊಳಿಸಬೇಕಿದೆ. ಈ ದಿಸೆಯಲ್ಲಿ ಅತೀ ಹೆಚ್ಚು ಯುವ ಸಮುದಾಯವನ್ನು ಹೊಂದಿರುವ ನಮ್ಮ ದೇಶದಲ್ಲಿ ಯುವಕರಿಗೆ ಹಲವು ವಿಷಯಗಳ ನೈಪುಣ್ಯ ತರಬೇತಿ ನೀಡಿದಾಗ ಗ್ರಾಮ ಸಶಕ್ತೀಕರಣಗೊಳ್ಳಲಿದೆ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದರು.
ಅರ್ಥಿಕ ಸ್ಥಿತಿ ಉನ್ನತ ಮಟ್ಟಕ್ಕೇರಲು ಸ್ವದೇಶಿ ಚಿಂತನೆ ಜಾಗೃತಗೊಳಿಸಬೇಕಿದೆ: ಕಲ್ಲಡ್ಕ ಪ್ರಭಾಕರ್ ಭಟ್ - Job Skills Training Camp
ಪುತ್ತೂರು ವಿವೇಕಾನಂದ ವಿದ್ಯಾ ವರ್ಧಕ ಸಂಘದ ಆಶ್ರಯದಲ್ಲಿ ಉಜಿರೆ ಶಾರದಾ ಮಂಟಪದಲ್ಲಿ ಉದ್ಯೋಗ ನೈಪುಣ್ಯ ತರಬೇತಿ ಶಿಬಿರ ಆಯೋಜಿಸಲಾಗಿತ್ತು.
ಪುತ್ತೂರು ವಿವೇಕಾನಂದ ವಿದ್ಯಾ ವರ್ಧಕ ಸಂಘದ ಆಶ್ರಯದಲ್ಲಿ ಉಜಿರೆ ಶಾರದಾ ಮಂಟಪದಲ್ಲಿ ಆಯೋಜಿಸಿದ್ದ ಉದ್ಯೋಗ ನೈಪುಣ್ಯ ತರಬೇತಿ ಶಿಬಿರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸ್ವದೇಶಿ ಕಲ್ಪನೆಯ ಜತೆಗೆ ಮಾರುಕಟ್ಟೆ ವಿಸ್ತರಣೆಯ ಕೌಶಲ್ಯವನ್ನು ಬೆಳೆಸಿಕೊಂಡಲ್ಲಿ ಸ್ಥಳೀಯ ವಸ್ತುಗಳು ಜಾಗತಿಕ ಮಟ್ಟದಲ್ಲಿ ಬೆಳೆಯಲು ಸಾಧ್ಯ. ಈ ನಿಟ್ಟಿನಲ್ಲಿ ಯುವ ಸಮುದಾಯಕ್ಕೆ ನೈಪುಣ್ಯ ತರಬೇತಿ ನೀಡಿದಾಗ ಹಳ್ಳಿಗಳು ಬಲಿಷ್ಠವಾಗಲಿವೆ ಎಂದರು.
ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿ, ಸಾವಿರಾರು ವರ್ಷದ ಆಧ್ಯಾತ್ಮ ಪರಂಪರೆಯನ್ನು ಜಗತ್ತಿಗೆ ಪರಿಚಯಿಸಿದ ದೇಶ ಭಾರತ. ಆದ್ದರಿಂದ ವಿದೇಶಿ ಚಿಂತನೆಯಿಂದ ಹೊರ ಬಂದು ಸ್ವದೇಶಿ ಚಿಂತನೆಯ ಭಾರತವನ್ನು ಕಟ್ಟಬೇಕಿದೆ. ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ಆತ್ಮ ನಿರ್ಭರ ಯೋಜನೆಯಡಿ ಆತ್ಮಶಕ್ತಿಯನ್ನು ಸುಭದ್ರಗೊಳಿಸುವ ತರಬೇತಿ ಶಿಬಿರಗಳು ಹೆಚ್ಚಾಗಲಿ ಎಂದರು.