ಸುಳ್ಯ:ಇಲ್ಲಿನ ಕಸಬ ಗ್ರಾಮದ ಹಳೇ ಬಸ್ ನಿಲ್ದಾಣದ ಬಳಿಯ ಜ್ಯುವೆಲ್ಲರಿ ಶಾಪ್ಗೆ ನುಗ್ಗಿ ಕಳ್ಳತನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರಿಂದ ಸುಮಾರು 6,61,500 ರೂಪಾಯಿ ಮೌಲ್ಯದ 147 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮಾರ್ಚ್ 31ರ ರಾತ್ರಿ ಕಸಬ ಗ್ರಾಮದ ಬಸ್ ನಿಲ್ದಾಣದ ಬಳಿಯ ಜ್ಯುವೆಲ್ಲರಿಗೆ ನುಗ್ಗಿದ ಕಳ್ಳರು ಮಾರಾಟಕ್ಕಾಗಿ ಇಟ್ಟಿದ್ದ ಬಳೆ, ಬೆಂಡೋಳೆ,ನಕ್ಲೇಸ್,ಚಿನ್ನದ ನಾಣ್ಯ ಸೇರಿದಂತೆ ಸುಮಾರು 7.5 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಹಾಗೂ 50,000 ರೂಪಾಯಿ ಹಣ ಕಳ್ಳತನ ಮಾಡಿ ಪರಾರಿಯಾಗಿದ್ದರು. ಇದಕ್ಕೆ ಸಂಬಂಧಿಸಿದಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಳ್ಳತನ ಮಾಡಿದ ವಸ್ತು ವಶಕ್ಕೆ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು ಕೇರಳ ರಾಜ್ಯದ ತಳಿಪರಂಬು ಆಲೆಕ್ಕೋಡು ನಿವಾಸಿ ತಂಗಚ್ಚ ಯಾನೆ ಮಾಥ್ಯು ಯಾನೆ ಮಹಮ್ಮದ್ ಮತ್ತು ಕೇರಳದ ತ್ರಿಶೂರ್ ಆಂಬಲ್ಲೂರು ನಿವಾಸಿ ಶಿಬು ಎಂಬವರನ್ನು ಬಂಧಿಸಿದ್ದಾರೆ.
ಆರೋಪಿಗಳ ವಿರುದ್ಧ ಸುಳ್ಯ ಹಾಗೂ ಪುತ್ತೂರು ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಪುತ್ತೂರಿನಲ್ಲೂ ಆರೋಪಿಗಳು ಕಳವು ನಡೆಸಿದ್ದಾರೆಂಬುದಾಗಿ ತಿಳಿದು ಬಂದಿದೆ.ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಓರ್ವ ಆರೋಪಿಗೋಸ್ಕರ ನ್ಯಾಯಾಂಗ ಬಂಧನ ಹಾಗೂ ಇನ್ನೋರ್ವ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಋಷಿಕೇಶ್ ಸೋನವನೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಭಾಸ್ಕರ್ ಹಾಗೂ ಡಿವೈಎಸ್ಪಿ ಗಾನಾ ಪಿ.ಕುಮಾರ್ ಅವರ ಮಾರ್ಗದರ್ಶನದಲ್ಲಿ ಸುಳ್ಯ ವೃತ್ತನಿರೀಕ್ಷಕ ನವೀನ್ ಚಂದ್ರ ಜೋಗಿ,ಸುಳ್ಯ ಪಿಎಸ್ಐ ಹರೀಶ್ ಎಂ.ಆರ್ ಮತ್ತು ರತನ್ ಕುಮಾರ್ ಹಾಗೂ ಸಿಬ್ಬಂದಿಗಳು ಪ್ರಕರಣ ಪತ್ತೆ ಹಚ್ಚಿದ್ದಾರೆ.