ಮಂಗಳೂರು:ನಗರದ ಹಂಪನಕಟ್ಟೆಯಲ್ಲಿ ಮಂಗಳೂರು ಜ್ಯುವೆಲ್ಲರಿಯೊಳಗಡೆ ಹಾಡಹಗಲೇ ಸಿಬ್ಬಂದಿಯ ಹತ್ಯೆ ಮಾಡಿದ್ದ ಹಂತಕನ ಪತ್ತೆ ಕಾರ್ಯಾಚರಣೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಶಂಕಿತ ಆರೋಪಿಯ ಸಿಸಿ ಕ್ಯಾಮರಾ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಫೆ.3ರಂದು ಮಧ್ಯಾಹ್ನ 3.30 ರಿಂದ 3.45 ರ ನಡುವೆ ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಹಂಪನಕಟ್ಟೆಯಲ್ಲಿರುವ ಮಂಗಳೂರು ಜ್ಯುವೆಲರ್ಸ್‌ಗೆ ಹಂತಕ ಚಿನ್ನ ಖರೀದಿಸುವವರ ಸೋಗಿನಲ್ಲಿ ಬಂದಿದ್ದನು. ಆ ಬಳಿಕ ಜ್ಯುವೆಲ್ಲರಿಯಲ್ಲಿ ಒಬ್ಬರೇ ಇದ್ದ ಸಿಬ್ಬಂದಿ ರಾಘವೇಂದ್ರ ಆಚಾರ್ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಚಿನ್ನವನ್ನು ದರೋಡೆ ಮಾಡಿ ಅಲ್ಲಿಂದ ರಿಕ್ಷಾದಲ್ಲಿ ಪರಾರಿಯಾಗಿದ್ದನು.
ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಹಂತಕನ ಭಾವಚಿತ್ರ ಪತ್ತೆಯಾಗಿದೆ. ಆರೋಪಿ ಬಗ್ಗೆ ಯಾವುದೇ ಮಾಹಿತಿ ಕಂಡು ಬಂದಲ್ಲಿ, ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಎಸಿಪಿ ಸಿಸಿಬಿ, ಮಂಗಳೂರು ನಗರ - ಪಿ.ಎ.ಹೆಗ್ಡೆ 9945054333, ಎಸಿಪಿ ಕೇಂದ್ರ ಉಪ ವಿಭಾಗ, ಮಂಗಳೂರು ನಗರ - ಮಹೇಶ್ ಕುಮಾರ್ -9480805320 ಅವರ ಮೊಬೈಲ್ ಫೋನ್ಗೆ ತಿಳಿಸಬಹುದು. ಮಾಹಿತಿದಾರರ ವಿವರಗಳನ್ನು ಗೌಪ್ಯವಾಗಿಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಹಿನ್ನೆಲೆ: ಫೆ. 3 ರಂದು ನಗರದ ಚಿನ್ನಾಭರಣವೊಂದರ ಅಂಗಡಿಯಲ್ಲಿ ಸಿಬ್ಬಂದಿ ರಾಘವ ಆಚಾರ್ಯ ಎಂಬವರನ್ನು ಚೂರಿಯಿಂದ ಇರಿದು ಹತ್ಯೆ ಮಾಡಲಾಗಿತ್ತು. ಹಂಪನಕಟ್ಟೆಯ ಮಂಗಳೂರು ಜ್ಯುವೆಲ್ಲರ್ಸ್ನಲ್ಲಿ ಈ ಘಟನೆ ನಡೆದಿತ್ತು. ಮಂಗಳೂರು ಜ್ಯುವೆಲ್ಲರ್ಸ್ ನಲ್ಲಿದ್ದ ಸಿಬ್ಬಂದಿಯನ್ನು ಚೂರಿಯಿಂದ ಇರಿದು ಕೊಲೆ ಮಾಡಲಾಗಿತ್ತು. ಮುಸುಕು ಹಾಕಿಕೊಂಡ ಬಂದ ವ್ಯಕ್ತಿಯೊಬ್ಬ ಅಂಗಡಿಗೆ ಪ್ರವೇಶಿಸಿ ರಾಘವ ಆಚಾರ್ಯರಿಗೆ ಚೂರಿಯಿಂದ ಇರಿದಿದ್ದ ಗಂಭೀರ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಷ್ಟರಲ್ಲೇ ಅವರು ಸಾವನ್ನಪ್ಪಿದ್ದರು. ಕೊಲೆ ಕೃತ್ಯವು ಸಿಸಿ ಕ್ಯಾಮರಾದಲ್ಲಿ ದಾಖಲಾಗಿತ್ತು.