ಕರ್ನಾಟಕ

karnataka

ETV Bharat / state

ಮಂಗಳೂರಿನಲ್ಲಿ ಜನತಾ ದರ್ಶನ; ನೂರಾರು ಅಹವಾಲು ಸ್ವೀಕರಿಸಿದ ಸಚಿವ ದಿನೇಶ್ ಗುಂಡೂರಾವ್ - ಈಟಿವಿ ಭಾರತ್​ ಕನ್ನಡ ನ್ಯೂಸ್

ಮೂಲಭೂತ ಸೌಕರ್ಯ, ಹಕ್ಕು ಪತ್ರ, ಆರೋಗ್ಯ ವ್ಯವಸ್ಥೆ ಸೇರಿದಂತೆ ನೂರಾರು ಅರ್ಜಿಗಳನ್ನು ಜನರು ಸಚಿವ ದಿನೇಶ್ ಗುಂಡೂರಾವ್ ಅವರಲ್ಲಿ ಸಲ್ಲಿಸಿದರು.

ಮಂಗಳೂರಿನಲ್ಲಿ ಜನತಾ ದರ್ಶನ
ಮಂಗಳೂರಿನಲ್ಲಿ ಜನತಾ ದರ್ಶನ

By ETV Bharat Karnataka Team

Published : Sep 25, 2023, 6:02 PM IST

ಮಂಗಳೂರು : ಇಂದು ರಾಜ್ಯದೆಲ್ಲೆಡೆ ನಡೆದ ಜನತಾ ದರ್ಶನ ಕಾರ್ಯಕ್ರಮಕ್ಕೆ ಮಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಜನತಾ ದರ್ಶನಕ್ಕೆ ಚಾಲನೆ ನೀಡುವ ಮೂಲಕ ನೂರಾರು ಅರ್ಜಿಗಳನ್ನು ಸ್ವೀಕರಿಸಿ, ಸಮಸ್ಯೆ ಆಲಿಸಿದರು.

ನಗರದ ಕುದ್ಮಲ್ ರಂಗರಾವ್ ಪುರಭವನದಲ್ಲಿ ಜನಸಾಮಾನ್ಯರ ಅಹವಾಲುಗಳನ್ನ ಆಲಿಸಿದ ಸಚಿವರು, ಜನರ ಕೆಲಸ, ಕಾರ್ಯಗಳನ್ನು ಶೀಘ್ರದಲ್ಲಿ ಪರಿಸರಿಸುವಂತೆ ಆಡಳಿತ ಅಧಿಕಾರಿ ವರ್ಗಕ್ಕೆ ಸೂಚನೆಯನ್ನು ನೀಡಿದರು. ಜನತಾ ದರ್ಶನದ ವೇಳೆ ಮಾತನಾಡಿದ ದಿನೇಶ್ ಗುಂಡೂರಾವ್, ಅರ್ಜಿ ಹಿಡಿದುಕೊಂಡು ಬರುವ ಜನಸಾಮಾನ್ಯರಿಗೆ ಸ್ಪಷ್ಟತೆ ಕೊಡಬೇಕು. ಕೇವಲ ಅರ್ಜಿಗಳನ್ನ ಸ್ವೀಕರಿಸಿದರೆ ಪ್ರಯೋಜನವಿಲ್ಲ. ಸ್ಥಳದಲ್ಲೇ ಅವರಿಗೆ ಪರಿಹಾರ ಒದಗಿಸುವಂತ ವ್ಯವಸ್ಥೆ ಜಾರಿಗೆ ಬರಬೇಕು. ಅವರನ್ನು ಪರದಾಡುವಂತೆ ಮಾಡಬಾರದು ಎಂದರು.

ಜನರು ಕೇಳುವ ಕೆಲಸ ಕಾರ್ಯಗಳು ಆಗತ್ತದೆಯೋ, ಇಲ್ಲವೋ ಎಂಬ ಸ್ಪಷ್ಟತೆಯನ್ನು ಅವರಿಗೆ ನೀಡಿ. ನೋಡೋಣ, ಮಾಡೋಣ ಎಂದು ಹೇಳಿ ಜನರನ್ನ ಅಲೆದಾಡಿಸುವ ಪರಿಸ್ಥಿತಿಯನ್ನು ತರಬೇಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಯಾವ ಕಾರ್ಯಗಳು ಈಡೇರಿಸಲು ಸಾಧ್ಯವೋ ಅವುಗಳನ್ನ ಸಾಧ್ಯವಾದಷ್ಟು ಶೀಘ್ರದಲ್ಲಿ ಮಾಡಿಕೊಡಿ. ಯಾವ ಕೆಲಸಗಳು ಮಾಡಲು ಸಾಧ್ಯವಿಲ್ಲವೋ ಆ ಬಗ್ಗೆ ಜನರಿಗೆ ನೇರವಾಗಿ ನೈಜ ಪರಿಸ್ಥಿತಿಯನ್ನು ತಿಳಿಸಿ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಜಿಲ್ಲಾ ಕೇಂದ್ರದಲ್ಲಿ ಅಷ್ಟೇ ಅಲ್ಲ ತಾಲೂಕು ಮಟ್ಟದಲ್ಲೂ ಜನತಾ ದರ್ಶನಗಳನ್ನ ನಡೆಸುವಂತೆ ಇದೇ ವೇಳೆ ದಿನೇಶ್ ಗುಂಡೂರಾವ್ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು. ಜಿಲ್ಲಾಡಳಿತ ಜನರ ಬಳಿಗೆ ಹೋಗಬೇಕು. ಗ್ರಾಮೀಣ ಪ್ರದೇಶದ ಹಲವು ಜನರಿಗೆ ಜಿಲ್ಲಾ ಕೇಂದ್ರಗಳಿಗೆ ಬರಲು ಕಷ್ಟವಾಗಿರುತ್ತದೆ. ಹೀಗಾಗಿ ತಾಲೂಕು ಮಟ್ಟದಲ್ಲಿ ಜನತಾ ದರ್ಶನ ನಡೆಸಿದರೆ, ಹಳ್ಳಿಗಾಡಿನ ಜನರಿಗೆ ತಮ್ಮ ಸಮಸ್ಯಗಳನ್ನ ಪರಿಹರಿಸಿಕೊಳ್ಳಲು ಅನುಕೂಲವಾಗಲಿದೆ. ಮುಂದಿನ ಜನತಾ ದರ್ಶನಗಳನ್ನ ತಾಲೂಕುಗಳಲ್ಲಿ ಆಯೋಜಿಸುವುದಾಗಿ ಅವರು ತಿಳಿಸಿದರು. ಜಿಲ್ಲೆಯಲ್ಲಿ ಇರುವ 9 ತಾಲೂಕುಗಳಲ್ಲೂ ಹಂತ ಹಂತವಾಗಿ ಜನತಾ ದರ್ಶನಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.

ಕಡಬ ತಾಲೂಕಿಗೆ ಮೂಲಭೂತ ಸೌಕರ್ಯವಿಲ್ಲ : ಕಡಬ ತಾಲೂಕಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಮತ್ತು ಆರೋಗ್ಯ ಇಲಾಖೆಯ ಬಗ್ಗೆ ಸಚಿವರಿಗೆ ಅಹವಾಲು ಸಲ್ಲಿಸಿ ಮಾತನಾಡಿದ ಕಡಬ ನಿವಾಸಿ ಸೈಯದ್ ಮೀರ್ ಸಾಬ್ ಅವರು, ಮಂತ್ರಿಗಳಿಗೆ ಕಡಬ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಬಗ್ಗೆ ಮನವಿಯನ್ನು ನೀಡಿದೆ. ಅಲ್ಲಿ 5 ರ ಬದಲಿಗೆ 2 ವೈದ್ಯರು, ಎಕ್ಸ್ ರೇ ಮೆಷಿನ್ ಇದ್ದರೂ ಸಿಬ್ಬಂದಿ ಇಲ್ಲ. ಡಯಾಲಿಸಿಸ್ ಕೇಂದ್ರ ಇನ್ನೂ ಆರಂಭವಾಗಿಲ್ಲ. ನಾವು ಕಡಬ ತಾಲೂಕಿನಲ್ಲಿ ಇದ್ದರೂ ಪುತ್ತೂರಿಗೆ ಹೋಗಬೇಕಾಗಿದೆ. ಜನರಿಗೆ ಭಾರಿ ಅನ್ಯಾಯವಾಗಿದೆ.

ಕಡಬ ತಾಲೂಕ ಆಗಿ 5 ವರ್ಷ 7 ತಿಂಗಳು ಆದರೂ 23 ಇಲಾಖೆಯ ಬದಲಿಗೆ ಕೇವಲ ಮೂರು ಇಲಾಖೆ ಮಾತ್ರ ಇದೆ. ಮಿನಿ ವಿಧಾನಸಭಾ ಮಾಡಲಾಯಿತಾದರೂ ರಿಜಿಸ್ಟರ್ ಆಫೀಸ್ ಇನ್ನೂ ಬಂದಿಲ್ಲ. ತೋಟಗಾರಿಕೆ, ಕೃಷಿ ಇಲಾಖೆಗೆ ಅಧಿಕಾರಿಗಳು ಇಲ್ಲ. ಈ ಬಗ್ಗೆ ಸಚಿವರು ಜಿಲ್ಲಾಧಿಕಾರಿಗಳ ಬಗ್ಗೆ ಗಮನಹರಿಸಲು ಸೂಚಿಸಿ ಮುಂದೆ ಕಡಬ ತಾಲೂಕಿಗೆ ಬರುವುದಾಗಿ ಭರವಸೆ ನೀಡಿದರು ಎಂದರು.

ಸೆಂಟ್ರಲ್ ಮಾರುಕಟ್ಟೆಯಲ್ಲಿ ಮಹಿಳಾ ವ್ಯಾಪಾರಿಗಳಿಗೆ ಸ್ಥಳವಕಾಶ ನೀಡಿ : ಕೆಲ ವರ್ಷಗಳ ಹಿಂದೆ ನೂತನ ಕಟ್ಟಡ ಕಟ್ಟಲು ಕೆಡವಲಾದ ಸೆಂಟ್ರಲ್ ಮಾರುಕಟ್ಟೆಯ ಪ್ರದೇಶದಲ್ಲಿ ಇದೀಗ ವ್ಯಾಪಾರ ಮಾಡಲು ಮಹಿಳಾ ವ್ಯಾಪಾರಿಗಳ ಸ್ಥಳವಕಾಶ ಇಲ್ಲ. ಮಹಿಳೆಯರಿಗೆ ವ್ಯಾಪಾರಕ್ಕೆ ಸ್ಥಳವಕಜಾಶ ನೀಡಬೇಕು ಮತ್ತು ಹೊಸ ಕಟ್ಟಡದಲ್ಲೂ ಮಹಿಳಾ ವ್ಯಾಪಾರಿಗಳಿಗೆ ಸ್ಥಳವಕಾಶ ನೀಡಲು ಮಹಿಳೆಯರು ಮನವಿ ಸಲ್ಲಿಸಿದರು. ಈ ಬಗ್ಗೆ ಕ್ರೆಮ ಕೈಗೊಳ್ಳುವ ಭರವಸೆಯನ್ನು ಸಚಿವರು ನೀಡಿದರು.

ಟ್ರಾಲ್ ಬೋಟ್ ಮಾಲೀಕ ಚೇತನ್ ಬೆಂಗ್ರೆಯವರು ನಗರದ ಬೆಂಗರೆಯ ಫೆರ್ರಿ ಬೋಟ್ ಪಾಯಿಂಟ್ ನಿಂದ ಸ್ಟೇಟ್ ಬ್ಯಾಂಕ್ ವರೆಗೆ ಪಡ್ಡೆ ಹುಡುಗರ ಕಾಟದಿಂದ ಹೆಣ್ಣುಮಕ್ಕಳಿಗೆ ತೊಂದರೆಯಾಗುತ್ತಿದೆ. ಮದ್ಯವ್ಯಸನಿಗಳ ಹಾವಳಿಯೂ ಇದೆ. ಈ ಸ್ಥಳದಲ್ಲಿ ಸ್ಟ್ರೀಟ್ ಲೈಟ್ ಇದ್ದರೂ ಬೆಳಕು ಸರಿಯಾಗಿ ಬೀಳುತ್ತಿಲ್ಲ. ಸಿಸಿ ಕ್ಯಾಮರಾವೂ ಇಲ್ಲ. ತಕ್ಷಣ ಇದಕ್ಕೆ ವ್ಯವಸ್ಥೆ ಮಾಡಬೇಕೆಂದು ಸಾರ್ವಜನಿಕರು ಮನವಿ ಮಾಡಿದರು.

ಅದೇ ರೀತಿ ಕಂದಾಯ ಇಲಾಖೆಯ ಸಮಸ್ಯೆಗಳ ಹಲವಾರು ಅಹವಾಲು, ಪಿಲಿಕುಳದಲ್ಲಿ ಸುಖಾಸುಮ್ಮನೆ ಕರ್ತವ್ಯದಿಂದ ವಜಾ ಮಾಡಿರುವ ಬಗ್ಗೆ ಪ್ರಾಣಿ ಪರಿಪಾಲಕನ ಮನವಿ ಸಲ್ಲಿಸಿ ಮತ್ತೆ ತನ್ನನ್ನು ಕರ್ತವ್ಯಕ್ಕೆ ಸೇರಿಸಬೇಕೆಂದು ಮನವಿ ಸಲ್ಲಿಸಿದರು. ಈ ಬಗ್ಗೆ ಪರಿಶೀಲಿಸುವ ಭರವಸೆಯನ್ನು ಸಚಿವರು ನೀಡಿದರು.

ಇದನ್ನೂ ಓದಿ :ಜನತಾ ದರ್ಶನ ಕಾರ್ಯಕ್ರಮದಿಂದ ಜನರ ಸಮಸ್ಯೆ ಅರಿತು, ಆಡಳಿತದಲ್ಲಿ ಹಿಡಿತ ಹೊಂದಲು ಸಹಕಾರಿ ಆಗಲಿದೆ: ಸಚಿವ ಮಧು ಬಂಗಾರಪ್ಪ

ABOUT THE AUTHOR

...view details