ಮಂಗಳೂರು : ಸುರತ್ಕಲ್ ನಲ್ಲಿ ನಿನ್ನೆ ಹತ್ಯೆಯಾದ ಜಲೀಲ್ ಅವರ ಧಪನ ಕಾರ್ಯ ಕೂಳೂರು ಮಸೀದಿಯಲ್ಲಿ ನಡೆಯಿತು. ಶನಿವಾರ ರಾತ್ರಿ ಸುರತ್ಕಲ್ ಕಾಟಿಪಳ್ಳದ ತನ್ನ ಅಂಗಡಿಯಲ್ಲಿದ್ದ ಜಲೀಲ್ ಅವರಿಗೆ ಚೂರಿ ಇರಿದು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು.
ಜಲೀಲ್ ಹತ್ಯೆ ಹಿನ್ನೆಲೆಯಲ್ಲಿ ಅವರ ನಿವಾಸದಲ್ಲಿ ಇಂದು ಭಾರಿ ಜನಸ್ತೋಮ ಸೇರಿತ್ತು. ಎ.ಜೆ ಆಸ್ಪತ್ರೆಯಿಂದ ಇಂದು ಮೃತದೇಹವನ್ನು ಆಂಬ್ಯುಲೆನ್ಸ್ ನಲ್ಲಿ ತಂದು ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆ ಬಳಿಕ ಮೃತದೇಹವನ್ನು ಜಮಾತ್ ಗೆ ಸೇರಿದ ಕೂಳೂರು ಮುಹಿಯ್ಯುದ್ದೀನ್ ಜುಮ್ಮಾ ಮಸೀದಿಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.
ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸುವಂತೆ ಪ್ರತಿಭಟನೆ : ಮೃತದೇಹವನ್ನು ಮೆರವಣಿಗೆ ಕೊಂಡೊಯ್ಯುವಾಗ ಸ್ಥಳಕ್ಕೆ ಡಿಸಿ ಆಗಮಿಸಬೇಕೆಂದು ಸ್ಥಳೀಯರು ಪಟ್ಟು ಹಿಡಿದರು. ಜಲೀಲ್ ಮೃತದೇಹವನ್ನು ಅಂತ್ಯಸಂಸ್ಕಾರಕ್ಕೆಂದು ಕೊಂಡೊಯ್ಯುತ್ತಿದ್ದ ಆಂಬ್ಯುಲೆನ್ಸ್ ತಡೆದ ಆಕ್ರೋಶಿತ ಗುಂಪು ಧರಣಿ ನಡೆಸಿತು. ಈವರೆಗೆ ಕೊಲೆ ಆರೋಪಿಗಳ ಬಂಧನವಾಗಿಲ್ಲ. ತಕ್ಷಣ ಆರೋಪಿಗಳನ್ನು ಬಂಧಿಸಿ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಜಿಲ್ಲಾಧಿಕಾರಿ ಬರುವವರೆಗೆ ಅಂತ್ಯಸಂಸ್ಕಾರ ನಡೆಸಲ್ಲ ಎಂದು ಧರಣಿನಿರತರು ಪಟ್ಟು ಹಿಡಿದರು. ಪರಿಣಾಮ, ಸ್ಥಳದಲ್ಲಿ ಕೆಲಹೊತ್ತು ಉದ್ವಿಗ್ನ ಪರಿಸ್ಥಿತಿ ಕಂಡುಬಂತು. ತಕ್ಷಣ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್ ಮಧ್ಯಪ್ರವೇಶಿಸಿ ಆಕ್ರೋಶಿತರನ್ನು ಸಮಾಧಾನಪಡಿಸಿದರು. ಬಳಿಕ ಆಕ್ರೋಶಿತ ಗುಂಪು ಧರಣಿಯಿಂದ ಹಿಂದೆ ಸರಿಯಿತು. ಬಳಿಕ ಮಸೀದಿಯಲ್ಲಿ ನಮಾಜ್ ನೆರವೇರಿಸಿ ಧಪನ ಭೂಮಿಯಲ್ಲಿ ಜಲೀಲ್ ಅವರ ಮೃತದೇಹವನ್ನು ಧಪನ ಮಾಡಲಾಯಿತು.
ಘಟನೆ ಹಿನ್ನೆಲೆ: ಶನಿವಾರ ರಾತ್ರಿ ಸುರತ್ಕಲ್ನಲ್ಲಿ ದುಷ್ಕರ್ಮಿಗಳಿಬ್ಬರು ಕೃಷ್ಣಾಪುರ ನಿವಾಸಿಯಾದ ಜಲೀಲ್ ಎಂಬುವರಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದರು. ನೈತಂಗಡಿಯಲ್ಲಿನ ತಮ್ಮ ದಿನಸಿ ಅಂಗಡಿಯಲ್ಲಿದ್ದ ಜಲೀಲ್ ಮೇಲೆ ಏಕಾಏಕಿ ಆಕ್ರಮಿಸಿದ ಆರೋಪಿಗಳು ಎದೆಯ ಭಾಗಕ್ಕೆ ಚೂರಿಯಿಂದ ಬಲವಾಗಿ ಇರಿದು ಪರಾರಿಯಾಗಿದ್ದರು.