ಮಂಗಳೂರು: ಕಾಂಗ್ರೆಸ್ ಪಕ್ಷ ಸೋಲಿಸುವ ನಿಟ್ಟಿನಲ್ಲಿ ಜೆಡಿಎಸ್, ಎಸ್‌ಡಿಪಿಐ, ಎಎಪಿ, ಎಂಐಎಂ ಪಕ್ಷಗಳು ಬಿಜೆಪಿ ಜೊತೆ ಚುನಾವಣಾ ಹೊಂದಾಣಿಕೆ ಮಾಡಿಕೊಂಡಿವೆ. ಹಾಗಾಗಿ ಈ ಎಲ್ಲ ಪಕ್ಷಗಳು ಬಿಜೆಪಿಯ ಬಿ ಟೀಂಗಳಾಗಿವೆ ಎಂದು ಮಾಜಿ ಕೇಂದ್ರ ಸಚಿವ ಹಾಗೂ ರಾಜ್ಯಸಭಾ ಸದಸ್ಯ ಜೈರಾಂ ರಮೇಶ್ ಆರೋಪಿಸಿದ್ದಾರೆ.
ನಗರದ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಯಾವುದೇ ವಿಧದ ಕೋಮುವಾದವನ್ನೂ ಯಾವತ್ತಿಗೂ ಸಹಿಸುವುದಿಲ್ಲ. ಎಐಸಿಸಿ ವರಿಷ್ಠ ರಾಹುಲ್ ಗಾಂಧಿ ಕೂಡ ಇದನ್ನು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಶಕ್ತಿಮೀರಿ ಶ್ರಮಿಸುತ್ತಿದೆ. ಈ ಸಂದರ್ಭ ಕಾಂಗ್ರೆಸ್ ಜೊತೆ ಕೈ ಜೋಡಿಸಬೇಕಾದ ಎಎಪಿ, ಎಸ್‌ಡಿಪಿಐ ಮತ್ತಿತರ ಪಕ್ಷಗಳು ಬಿಜೆಪಿಗೆ ಅನುಕೂಲವಾಗುವಂತೆ ಕಾರ್ಯಾಚರಿಸುತ್ತಿವೆ ಎಂದರು.
ಬಿಜೆಪಿ ಉತ್ತರ ಪ್ರದೇಶದಲ್ಲಿ ಉಚಿತ ಅಡುಗೆ ಸಿಲಿಂಡರ್ ನೀಡಿಲ್ಲ - ಜೈ ರಾಂ :ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಪ್ರತಿ ಕುಟುಂಬಕ್ಕೆ ವರ್ಷಕ್ಕೆ ಮೂರು ಅಡುಗೆ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡುವುದಾಗಿ ಭರವಸೆ ನೀಡಿದೆ. ಉತ್ತರ ಪ್ರದೇಶದಲ್ಲೂ ಈ ಭರವಸೆ ನೀಡಿ ಅವರು ಅಧಿಕಾರಕ್ಕೆ ಬಂದಿದ್ದಾರೆ. ಅಲ್ಲಿ ಯಾವುದೇ ಕುಟುಂಬಕ್ಕೂ ಅಡುಗೆ ಸಿಲಿಂಡರ್ ಉಚಿತವಾಗಿ ನೀಡಿಲ್ಲ ಎಂದು ಹೇಳಿದರು. ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜಸ್ಥಾನ, ಹಿಮಾಚಲ ಪ್ರದೇಶ ಹಾಗೂ ಛತ್ತೀಸ್ಗಢದ ಚುನಾವಣೆಯಲ್ಲಿ ಪಕ್ಷವು ನೀಡಿದ ಪ್ರಮುಖ ಭರವಸೆಗಳನ್ನು ಈಡೇರಿಸಿವೆ. ರಾಜಸ್ಥಾನದಲ್ಲಿ ಎಲ್ಲ ನಾಗರಿಕರಿಗೂ ಆರೋಗ್ಯ ವಿಮೆ ಮಾಡಿಸಿದೆ. 25 ಲಕ್ಷ ರೂ.ವರೆಗೆ ಚಿಕಿತ್ಸೆ ಉಚಿತವಾಗಿ ಸಿಗುತ್ತಿದೆ. ಹಿಮಾಚಲ ಪ್ರದೇಶ ಮತ್ತು ಛತ್ತೀಸಗಡದಲ್ಲಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಲಾಗಿದೆ ಎಂದು ಜೈರಾಂ ರಮೇಶ್ ಹೇಳಿದರು.