ಕರ್ನಾಟಕ

karnataka

ETV Bharat / state

ಅಮಿತ್ ಶಾ ಮಂಗಳೂರಿಗೆ ಬಂದ್ರೆ ಉಪವಾಸ ಸತ್ಯಾಗ್ರಹ ಕೈಗೊಳ್ಳುವೆ: ಐವನ್ ಡಿಸೋಜ

ನಮ್ಮ ಊರಿನಲ್ಲಿ ನಮಗೆ ಶಾಂತಿ ಮುಖ್ಯ. ಇಲ್ಲಿ ಅಮಿತ್​ ಷಾ ಬಂದು ಮತ್ತೆ ಅಶಾಂತಿ ಸೃಷ್ಟಿಸುವುದು ಬೇಡ. ನೀವು ಬಂದಲ್ಲಿ ಗೋಬ್ಯಾಕ್ ಅಮಿತ್ ಷಾ ಎಂದು ಪ್ರತಿಭಟನೆ ಮಾಡಲಾಗುವುದು ಎಂದು ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಆಗ್ರಹಿಸಿದ್ದಾರೆ.

Ivon Dsouza
ಐವನ್ ಡಿಸೋಜ

By

Published : Jan 6, 2020, 6:37 PM IST

ಮಂಗಳೂರು:ಗೃಹ ಸಚಿವ ಅಮಿತ್ ಶಾ ಪೌರತ್ವ ತಿದ್ದುಪಡಿ ಕಾಯ್ದೆಯ ಪರವಾಗಿ ಸಮಾವೇಶ ನಡೆಸಲು ಮಂಗಳೂರಿಗೆ ಜ.19 ರಂದು ಬಂದು ಇಲ್ಲಿನ ಪರಿಸ್ಥಿತಿಯನ್ನು ಉಲ್ಬಣಗೊಳಿಸುವುದು ಬೇಡ. ಅವರು ಮಂಗಳೂರಿಗೆ ಆಗಮಿಸಿದರೆ ಉಪವಾಸ ಸತ್ಯಾಗ್ರಹ ಕೈಗೊಳ್ಳುವೆ ಎಂದು ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಹೇಳಿದರು.

ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ

ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಜನರು ಆಕ್ರೋಶಗೊಂಡಿದ್ದಾರೆ‌. ನಮ್ಮ ಊರಿನಲ್ಲಿ ನಮಗೆ ಶಾಂತಿ ಮುಖ್ಯ. ಇಲ್ಲಿ ಬಂದು ಮತ್ತೆ ಅಶಾಂತಿ ಸೃಷ್ಟಿಸುವುದು ಬೇಡ. ನೀವು ಬಂದಲ್ಲಿ ಗೋಬ್ಯಾಕ್ ಅಮಿತ್ ಶಾ ಎಂದು ಪ್ರತಿಭಟನೆ ಮಾಡಲಾಗುವುದು ಎಂದು ಆಗ್ರಹಿಸಿದರು.

ಒಂದು ದಿನದಲ್ಲಿ ಒಂದು ಸಾವಿರ ಕಡೆಗಳಲ್ಲಿ ಒಂದು ಕೋಟಿ ಜನರು ದೇಶದಲ್ಲಿ ಸ್ವಾತಂತ್ರ್ಯ ಹೋರಾಟದ ಬಳಿಕ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಬೀದಿಗಿಳಿದಿದ್ದಾರೆ. ಆದರೂ ಬಿಜೆಪಿ ಏನೂ ಆಗಿಲ್ಲ ಎಂಬಂತೆ ವರ್ತಿಸುತ್ತಿದೆ. ನಿನ್ನೆಯಿಂದ ಎನ್ಆರ್ ಸಿ, ಸಿಎಎ ಬಗ್ಗೆ ಜನ ಜಾಗೃತಿ ಮೂಡಿಸಲು ಮನೆಮನೆಗೆ ಹೋಗುತ್ತೇವೆ ಎಂಬ ಹೊಸ ನಾಟಕ ಶುರು ಮಾಡಿದೆ. ಇದರಿಂದ ಬಿಜೆಪಿಗೆ ತಲೆ ಕೆಟ್ಟಿದೆ ಎಂದು ಸ್ಪಷ್ಟವಾಗಿದೆ ಎಂದರು.

ಎನ್ಆರ್​ಸಿ, ಸಿಎಎ ಕಾಯ್ದೆಯಿಂದ ಮುಸ್ಲಿಂ ಸಮುದಾಯಕ್ಕೆ ಏನೂ ತೊಂದರೆ ಇಲ್ಲದಿದ್ದರೆ, ಆ ಕಾಯ್ದೆಯ ಪ್ರಕಾರ ಮುಸ್ಲಿಂ ಸಮುದಾಯವನ್ನು ಯಾಕೆ ಹೊರಗಿಡಲಾಗಿದೆ. ಬಿಜೆಪಿಗೆ ನೈತಿಕತೆ ಇದ್ದಲ್ಲಿ ಅವರು ತಂದಿರುವ ಕಾಯ್ದೆಯಲ್ಲಿ ಮುಸ್ಲಿಂ ಸಮುದಾಯವನ್ನು ಸೇರಿಸಲಿ. ಸೋಮಶೇಖರ್ ರೆಡ್ಡಿ ಹೇಳಿದಂತೆ 80% ಹಿಂದೂಗಳನ್ನು ಮತ್ತು 20% ಮುಸ್ಲಿಮರ ನ್ನು ಬೇರೆ ಬೇರೆ ಮಾಡುವುದೇ ನಿಮ್ಮ ಉದ್ದೇಶ. ನಿಮಗೆ ತಾಕತ್ತಿದ್ದರೆ ಬಿಜೆಪಿ ಶಾಸಕತ್ವದಿಂದ ಸೋಮಶೇಖರ್ ರೆಡ್ಡಿಯನ್ನು ವಜಾಗೊಳಿಸಿ ಎಂದು ಐವನ್ ಡಿಸೋಜ ಸವಾಲೆಸೆದರು.

ಯಾವುದಾದರೊಂದು ಜ್ವಲಂತ ಸಮಸ್ಯೆಗಳನ್ನು ಮುಂದಿರಿಸಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಪ್ರಧಾನ ಮಂತ್ರಿಗಳು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಮಾಡೋದಿಲ್ಲ ಎನ್ನುತ್ತಾರೆ. ಆದರೆ ರಾಷ್ಟ್ರದ ಗೃಹಮಂತ್ರಿ ಅಮಿತ್ ಷಾ ಒಂದು ಇಂಚೂ ಇದರಿಂದ ಹಿಂದೆ ಸರಿಯುವುದಿಲ್ಲ ಎಂದು ಗೊಂದಲ ಸೃಷ್ಟಿಸುತ್ತಾರೆ. ಪೌರತ್ವ ಕಾಯ್ದೆ 1957 ರಲ್ಲಿ ಈ ದೇಶದಲ್ಲಿ ಜಾರಿಗೆ ಬಂದಿದ್ದು, ಹಿಂದೆಯೂ ಕೊಡಲಾಗಿತ್ತು . ಯಾರಿಗೆ ಅವಶ್ಯಕತೆ ಇದೆಯೋ ಅವರ ದಾಖಲೆಗಳನ್ನು ಪರಿಶೀಲನೆ ನಡೆಸಿ ಈ‌ ದೇಶದ ಪೌರತ್ವ ನೀಡಲಾಗುತ್ತಿತ್ತು. ಆದರೆ ನಿಮಗೆ ದೇಶದಲ್ಲಿ ದ್ವೇಷದ ರಾಜಕೀಯ ಮಾಡಲು ಮುಸ್ಲಿಮರನ್ನು ಹೊರಗಿರಿಸಿ ಹೊಸದಾಗಿ ತಿದ್ದುಪಡಿ ಮಾಡಿದಿರಿ. ಈ ಕಾನೂನನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು ಎಂದು ನಾನು ಒತ್ತಾಯ ಮಾಡುತ್ತೇನೆಂದು ಐವನ್ ಡಿಸೋಜ ಆಗ್ರಹಿಸಿದರು.

ಈ ಸಂದರ್ಭ ಕಾಂಗ್ರೆಸ್ ದ.ಕ.ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಉಪ ಮೇಯರ್ ಮಹಮ್ಮದ್, ನಜೀರ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.

ABOUT THE AUTHOR

...view details