ಮಂಗಳೂರು:ವಿ ಡಿ ಸಾವರ್ಕರ್ಗೆ ಭಾರತರತ್ನ ಪ್ರಶಸ್ತಿ ಕೊಡಬೇಕೆಂದು ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದೆ. ಸಾವರ್ಕರ್ ಓರ್ವ ಮರಾಠಿ ಬ್ರಾಹ್ಮಣನಾದ ಕಾರಣ ಮಹಾರಾಷ್ಟ್ರದಲ್ಲಿ ಚುನಾವಣೆ ಗೆಲ್ಲಲು ಮಾಡಿದ ತಂತ್ರಗಾರಿಕೆ ಎಂದು ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ ಆರೋಪಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ.. ನಗರದ ಮಲ್ಲಿಕಟ್ಟೆಯಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ದೇಶದ ಚರಿತ್ರೆಯನ್ನು ಬಹಳ ಬೇಗ ಮರೆಯುವ ಕಾರ್ಯ ನಡೆಯುತ್ತಿದೆ. ವಿ ಡಿ ಸಾವರ್ಕರ್ ರಾಷ್ಟ್ರಪಿತ ಮಹಾತ್ಮ ಗಾಂಧಿಯ ಹತ್ಯೆಗೆ ಸಂಚು ರೂಪಿಸಿದವರಲ್ಲಿ ಒಬ್ಬರು. ಈ ದೇಶ ಇಬ್ಭಾಗವಾಗಲು ಕಾರಣವೇ ವಿ ಡಿಸಾವರ್ಕರ್. ಅಂತವರಿಗೆ ಭಾರತ ರತ್ನ ಕೊಡುತ್ತಿರುವುದು ಅತ್ಯಂತ ದುರಾದೃಷ್ಟಕರ ಎಂದರು.
ಇತ್ತೀಚೆಗೆ ಡೊನಾಲ್ಡ್ ಟ್ರಂಪ್ ಮೋದಿಯವರಿಗೆ ರಾಷ್ಟ್ರಪಿತ ಎಂದಾಗ ಅದನ್ನ ವಿರೋಧಿಸಲಿಲ್ಲ. ಇದರಿಂದ ಅವರು ದೇಶಕ್ಕೇನು ಸಂದೇಶ ನೀಡಿದ್ದಾರೆ. ಈ ದೇಶದ ಚರಿತ್ರೆಯನ್ನೇ ತಿದ್ದಬೇಕೆನ್ನುವುದು ಅವರ ಉದ್ದೇಶ. ಬಿಜೆಪಿಯವರು 2015ರಲ್ಲಿ ಮೋದಿ ಪ್ರಧಾನಿ ಆದ ಬಳಿಕವೇ ಈ ದೇಶಕ್ಕೆ ಸ್ವಾತಂತ್ರ್ಯ ದೊರಕಿರುವುದು ಎಂದು ಸಾಧಿಸಲು ಹೊರಟಿದ್ದಾರೆ ಎಂದು ಹೇಳಿದರು.
ಸಿ ಟಿ ರವಿಯವರು ಬಹಳ ಲಘುವಾಗಿ ಸಿದ್ದರಾಮಯ್ಯರ ವಿರುದ್ಧವಾಗಿ ಮಾತನಾಡಿದ್ದಾರೆ. ಅವರ ಪುತ್ರನ ಸಾವಿನ ಪ್ರಕರಣವನ್ನು ಎಳೆದು ತಂದಿದ್ದಾರೆ. ಆದರೆ, ಸಿ ಟಿ ರವಿಯವರು ಕಂಠಪೂರ್ತಿ ಕುಡಿದು ವಾಹನ ಚಲಾಯಿಸಿ, ರಸ್ತೆ ಬದಿ ನಡೆದುಕೊಂಡು ಹೋಗುತ್ತಿರುವವರ ಮರಣಕ್ಕೆ ಕಾರಣವಾಗಿದ್ದು ನಮ್ಮ ಮುಂದಿದೆ. ಸಿ ಟಿ ರವಿ ಹೋಗಿ ಕೋಟಿ ರವಿ ಆಗಿದ್ದು ಹೇಗೆ ಎಂದು ತಿಳಿದಿದೆ. ಅವರಿಂದ ಸಿದ್ದರಾಮಯ್ಯರಿಗೆ ಸಲಹೆ ಸೂಚನೆಗಳು ಬೇಕಾಗಿಲ್ಲ ಎಂದು ಐವನ್ ಡಿಸೋಜ ಆಕ್ರೋಶ ವ್ಯಕ್ತಪಡಿಸಿದರು.