ಮಂಗಳೂರು: ಕೇಂದ್ರ ಸರ್ಕಾರ ನಿನ್ನೆ ಮಂಡಿಸಿದ ಬಜೆಟ್ ಯುವ ಭಾರತದ, ರೈತರ, ಸಾಮಾನ್ಯ ವರ್ಗದವರ, ಪ್ರಗತಿಯ ವಿರೋಧಿ ಬಜೆಟ್ ಆಗಿದೆ. ದೇಶದ ಆರ್ಥಿಕ ಸ್ಥಿತಿಯನ್ನು ಯಾವ ರೀತಿಯಲ್ಲಿಯೂ ಸರಿಪಡಿಸಲಾಗದಂತಹ ಈ ಬಜೆಟ್, ಆರ್ಥಿಕ ದಿಗ್ಭಂಧನ ಮಾಡುವಂತಹ ಪರಿಸ್ಥಿತಿಯನ್ನು ಒದಗಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಬಜೆಟ್ ವಿರುದ್ಧ ಮಾತನಾಡಿದರು.
ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಜೆಟ್ಗಿಂತ ಮೊದಲು ಪ್ರಧಾನಿ ನರೇಂದ್ರ ಮೋದಿಯವರು ಎಲ್ಲಾ ರಾಜ್ಯಗಳ ಹಣಕಾಸು ಸಚಿವರ ಹಾಗೂ ಮುಖ್ಯಮಂತ್ರಿಗಳ ಸಭೆ ನಡೆಸಿದ್ದರು. ಅದರಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 13 ಸಭೆಗಳಿಗೆ ಹಾಜರಾಗಿಲ್ಲ. ಆದ್ದರಿಂದ ಇವರು ಯಾವ ರೀತಿಯಲ್ಲಿ ಬಜೆಟ್ ಮಂಡಿಸಲು ಸಾಧ್ಯ? ಎಂದು ಪ್ರಶ್ನಿಸಿದರು.
ಮುದ್ರಾ ಯೋಜನೆಯಲ್ಲಿ ಸಾಲ ಪಡೆದವರು ಯಾರೂ ದುಡ್ಡು ಕಟ್ಟಿಲ್ಲ. ಮೇಕ್ ಇನ್ ಇಂಡಿಯಾದ ಬಗ್ಗೆ ಈ ಬಜೆಟ್ನಲ್ಲಿ ಉಲ್ಲೇಖವಿಲ್ಲ. ಈಗ ಮೇಕ್ ಇನ್ ಇಂಡಿಯಾ ಬಿಟ್ಟು ಆ್ಯಸಂಬಲ್ ಇಂಡಿಯಾ ಪ್ರಾರಂಭಿಸಲಾಗಿದೆ. ಸಾಮಗ್ರಿಗಳನ್ನು ವಿದೇಶದಿಂದ ಆಮದು ಮಾಡಿ ಜೋಡಿಸುವ ಕೆಲಸವನ್ನು ಇಲ್ಲಿನ ಇಂಜಿನಿಯರ್ಗಳಿಗೆ, ಕೆಲಸಗಾರರಿಗೆ ನೀಡಲಾಗುತ್ತಿದೆ. ಭಾರತದ ಇತಿಹಾಸದಲ್ಲಿಯೇ ನಿರುದ್ಯೋಗಿಗಳು ಅಧಿಕವಾಗುತ್ತಿದ್ದಾರೆ. 2014 ಮಾರ್ಚ್ ನಿಂದ 2019 ಸೆಪ್ಟೆಂಬರ್ ವರೆಗೆ 38 ಲಕ್ಷ ಕೋಟಿ ರೂ. ಕೇಂದ್ರ ಸರ್ಕಾರ ಸಾಲ ಮಾಡಿದೆ. ಈಗ ಪ್ರತಿಯೊಬ್ಬರ ತಲೆಯ ಮೇಲೆಯೂ 27,200 ರೂ. ಸಾಲವಿದೆ ಎಂದರು.
ಬಜೆಟ್ ಬಗ್ಗೆ ಐವನ್ ಡಿಸೋಜಾ ಬೇಸರ ನಮ್ಮನ್ನೆಲ್ಲಾ ಇಂದು ಕೇಂದ್ರ ಸರ್ಕಾರ ಸಾಲಗಾರರನ್ನಾಗಿ ಮಾಡಿದೆ. ಇಷ್ಟು ದೊಡ್ಡ ಮಟ್ಟದ ಸಾಲ ಸ್ವತಂತ್ರ ಭಾರತದ ಇತಿಹಾಸದಲ್ಲೇ ಎಂದೂ ಆಗಿಲ್ಲ. ಆದ್ದರಿಂದ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸರಿಪಡಿಸಲು ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ನಮ್ಮ ದೇಶದ ಭವಿಷ್ಯ ತೂಗುಯ್ಯಾಲೆಯಲ್ಲಿದೆ ಎಂದು ಅಭಿಪ್ರಾಯಪಟ್ಟರು.
ಪ್ರವಾಸೋದ್ಯಮಕ್ಕೂ ಯಾವುದೇ ಕೊಡುಗೆ ನೀಡಿಲ್ಲ. ರೈಲ್ವೆಯಲ್ಲಿಯೂ ನಿರೀಕ್ಷೆ ಹುಸಿಯಾಗಿವೆ. ಬಜೆಟ್ ಮಂಡನೆಯಾದಾಗ ದೇಶದ ಎಲ್ಲಾ ಸಂಸದರು ಇದ್ದರೂ ನಮ್ಮ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲು ಅವರು ಇಲ್ಲಿಯೇ ಸುತ್ತಾಡುತ್ತಿದ್ದಾರೆ ವ್ಯಂಗ್ಯವಾಡಿದರು.